ಬಾಂಗ್ಲಾದೇಶ ರೈಫಲ್ಸ್ ಅರೆಸೇನಾ ಪಡೆಯ ಮುಖ್ಯಕಚೇರಿಯ ಸಂಕೀರ್ಣದಲ್ಲಿ ಭಾರಿ ಗುಂಡಿನ ಚಕಮಕಿ ಇನ್ನೂ ಮುಂದುವರೆದಿದ್ದು, ಬಂಡಾಯವನ್ನು ಅಡಗಿಸಲು ಸೇನೆಯನ್ನು ಕರೆಸಲಾಗಿದೆ.
ಗುಂಡಿನ ಚಕಮಕಿಯಿಂದಾಗಿ ಸಂಕೀರ್ಣದ ಒಂದು ಭಾಗಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ದಟ್ಟವಾದ ಹೊಗೆ ಸಂಕೀರ್ಣದಿಂದ ಮೇಲೇಳುತ್ತಿದೆಯೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ವೇತನದಲ್ಲಿ ವಿವಾದದ ಕಿಡಿ ಉಂಟಾಗಿದ್ದೇ ಬಂಡಾಯ ಸ್ಫೋಟಿಸಲು ಕಾರಣವೆಂದು ಹೇಳಲಾಗಿದ್ದು ಬಿಡಿಆರ್ ಸೈನಿಕರು ತಮ್ಮ ಅಧಿಕಾರಿಗಳ ಮೇಲೆ ಗುಂಡು ಹಾರಿಸಿದ್ದಾರೆಂದು ತಿಳಿದುಬಂದಿದೆ.
ಕೆಲವು ಸಿಬ್ಬಂದಿ ಸಂಕೀರ್ಣದ ಹೊರಗೆ ಧಾವಿಸಿ ಸಮೀಪದ ಶಾಪಿಂಗ್ ಸಂಕೀರ್ಣಕ್ಕೆ ಮುತ್ತಿಗೆ ಹಾಕಿದರೆಂದು ಟಿವಿ ಚಾನೆಲ್‌ಗಳು ವರದಿ ಮಾಡಿವೆ.ಸೇನೆ ಮತ್ತು ಪೊಲೀಸರು ಮುಖ್ಯಕಚೇರಿಯನ್ನು ಸುತ್ತುವರಿದಿದ್ದು, ಪಿಲ್ಖಾನಾ ಶಿಬಿರಗಳ ಮೇಲ್ಭಾಗದಲ್ಲಿ ವಾಯುದಳದ ಹೆಲಿಕಾಪ್ಟರ್‌ಗಳು ಪಹರೆ ನಡೆಸಿದವು.
ಭಾರೀ ಗುಂಡಿನ ಶಬ್ದ ಕೇಳಿಬರುತ್ತಿದ್ದು ಸಂಕೀರ್ಣದಿಂದ ದಟ್ಟವಾದ ಹೊಗೆ ಆವರಿಸಿದೆ ಎಂದು ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಿಡಿಆರ್ ಸಂಕೀರ್ಣಕ್ಕೆ ಮುತ್ತಿಗೆ ಹಾಕಿರುವ ಸೇನಾಪಡೆಯು ಬಂಡಾಯವೆದ್ದ ಸೈನಿಕರು ಶರಣಾಗತಿಯಾಗಿ ತಮ್ಮ ಶಿಬಿರಗಳಿಗೆ ಹಿಂತಿರುಗುವಂತೆ ಕಟುವಾದ ಎಚ್ಚರಿಕೆ ನೀಡಿದೆ. ಬಿಡಿಆರ್ ಮುಖ್ಯಕೇಂದ್ರದಲ್ಲಿ ಸತ್ತವರ ನಿಖರ ಸಂಖ್ಯೆ ತಿಳಿದಿಲ್ಲವಾದರೂ ಅನೇಕ ಮಂದಿ ಸಾವುನೋವಿಗೆ ಈಡಾಗಿದ್ದಾರೆಂದು ಬಿಡಿಆರ್ ಸೈನಿಕರ ಬಂಧುಗಳು ತಿಳಿಸಿದ್ದಾರೆ. |