ವೇತನ ತಾರತಮ್ಯದ ಹಿನ್ನೆಲೆಯಲ್ಲಿ ಬಾಂಗ್ಲಾದೇಶದ ಅರೆಮಿಲಿಟರಿ ಪಡೆಯಿಂದ ಢಾಕಾದ ಮುಖ್ಯಕಚೇರಿಯಲ್ಲಿ ಭುಗಿಲೆದ್ದ ಬಂಡಾಯಕ್ಕೆ ಸುಮಾರು 50 ಜನರು ಬಲಿಯಾಗಿದ್ದಾರೆಂದು ಗುರುವಾರ ಸರಕಾರಿ ಸಚಿವರೊಬ್ಬರು ತಿಳಿಸಿದ್ದಾರೆ.
ಸರಕಾರ ಕ್ಷಮಾದಾನದ ಪ್ರಸ್ತಾಪ ಮಾಡಿದ ಬಳಿಕ ಬಂಡಾಯ ಸೈನಿಕರು ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸಿದ್ದರೂ ಕೂಡ ಗುರುವಾರ ಮತ್ತೆ ಹಿಂಸಾಚಾರ ಭುಗಿಲೇಳುವ ಮೂಲಕ ನೂತನ ಪ್ರಧಾನಮಂತ್ರಿ ಶೇಖ್ ಹಸೀನಾ ಅವರಿಗೆ ಸವಾಲಾಗಿ ಪರಿಣಮಿಸಿದೆ.
ಸೇನಾ ಬೆಂಬಲಿತ ತುರ್ತುಪರಿಸ್ಥಿತಿ ಆಡಳಿತದ ಬಳಿಕ ಸುಮಾರು 2 ವರ್ಷಗಳಾದ ಮೇಲೆ ಹಸೀನಾ ಚುನಾವಣೆಯಲ್ಲಿ ಗೆದ್ದಿದ್ದರು. ಸೈನಿಕರ ಬಂಡಾಯದಿಂದಾಗಿ ವಿದೇಶಿ ಬಂಡವಾಳ ಆಕರ್ಷಿಸುವ ಅವರ ಯತ್ನಕ್ಕೆ ಪೆಟ್ಟು ಬಿದ್ದಿದೆ. ಬಾಂಗ್ಲಾದೇಶ ರೈಫಲ್ಸ್ ಮುಖ್ಯಕಚೇರಿಯಲ್ಲಿ ಸಂಭವಿಸಿದ ವ್ಯಾಪಕ ಗುಂಡಿನ ಚಕಮಕಿಗೆ ಸುಮಾರು 50 ಜನರು ಬಲಿಯಾಗಿದ್ದಾರೆಂದು ಕಾನೂನು ಖಾತೆ ರಾಜ್ಯಸಚಿವ ಮೊಹ್ಮದ್ ಖುಮ್ರಾಲ್ ಇಸ್ಲಾಂ ತಿಳಿಸಿದ್ದಾರೆ.
ಬಂಡಾಯವೆದ್ದ ಸೈನಿಕರು ಬಳಿಕ ಶರಣಾಗಿ ಚೀನಾ ನಿರ್ಮಿತ ಸ್ವಯಂಚಾಲಿತ ಬಂದೂಕುಗಳು, ಗ್ರೆನೇಡ್‌ಗಳನ್ನು ಗೃಹಸಚಿವರಾದ ಸಹಾರಾ ಖಾಟುನ್ ಅವರಿಗೆ ಹಸ್ತಾಂತರಿಸಿದರು. ಕೆಲವು ಬಿಡಿಆರ್ ಬಂಡಾಯಸೈನಿಕರನ್ನು ಪ್ರಧಾನಿ ಹಸೀನಾ ಭೇಟಿಮಾಡಿ ಬಿಕ್ಕಟ್ಟಿನ ಅಂತ್ಯಕ್ಕೆ ಯತ್ನಿಸಿದ ಬಳಿಕ ಸೈನಿಕರು ಶರಣಾಗಿದ್ದಾರೆ. ತಮ್ಮ ನಿವಾಸದಲ್ಲಿ ನಡೆದ ಒಂದು ಗಂಟೆ ಕಾಲದ ಭೇಟಿಯಲ್ಲಿ ಹಸೀನಾ ಬಂಡಾಯಗಾರರಿಗೆ ಕ್ಷಮಾದಾನದ ಭರವಸೆ ನೀಡಿ, ಸೈನಿಕರ ಬೇಡಿಕೆಗಳಿಗೆ ಸ್ಪಂದಿಸುವುದಾಗಿ ಹಸೀನಾ ಭರವಸೆ ನೀಡಿದ ಬಳಿಕ ಬಂಡಾಯ ಸೈನಿಕರು ತಮ್ಮ ಶಸ್ತ್ರಾಸ್ತ್ರಗಳನ್ನು ಒಪ್ಪಿಸಿದ್ದರು.
ಆದರೆ ಇಂದು ಬೆಳಿಗ್ಗೆ ಸೇನಾಪಡೆ ಮತ್ತು ಬಾಂಗ್ಲಾ ರೈಫಲ್ಸ್ ನಡುವೆ ಗುಂಡಿನ ಕಾಳಗ ಆರಂಭಗೊಂಡಿದ್ದು, ಪ್ರಧಾನಿ ಶೇಖ್ ಹಸೀನಾ ತುರ್ತು ಸಚಿವ ಸಂಪುಟ ಸಭೆ ಕರೆದಿದ್ದಾರೆ.
|