ಉಗ್ರಗಾಮಿಗಳ ನೆಲೆಗಳ ಮೇಲೆ ದಾಳಿಗೆ ಪೈಲಟ್‌ರಹಿತ ಡ್ರೋನ್ ವಿಮಾನಗಳ ಬಳಕೆಯನ್ನು ಕುರಿತು ಅಮೆರಿಕ ಮರುಚಿಂತನೆ ಮಾಡಬೇಕೆಂದು ಪಾಕಿಸ್ತಾನ ಬಯಸಿರುವುದಾಗಿ ವಿದೇಶಾಂಗ ಸಚಿವರು ತಿಳಿಸಿದ್ದಾರೆ.
ಆಫ್ಘಾನಿಸ್ತಾನ ಮತ್ತು ಪಾಕಿಸ್ತಾನಗಳನ್ನು ಕುರಿತು ಒಬಾಮಾ ಆಡಳಿತದ ನೀತಿ ಪರಾಮರ್ಶೆ ಸಭೆಯಲ್ಲಿ ಭಾಗವಹಿಸಲು ವಾಷಿಂಗ್ಟನ್ನಿಗೆ ಭೇಟಿ ನೀಡುತ್ತಿರುವ ವಿದೇಶಾಂಗ ಸಚಿವ ಶಾ ಮೆಹ್ಮೂದ್ ಖುರೇಷಿ, ಡ್ರೋನ್‌ಗಳಿಗೆ ಸಂಬಂಧಿಸಿದಂತೆ ಅಮೆರಿಕ ತನ್ನ ಕಾರ್ಯತಂತ್ರದ ಪರಾಮರ್ಶೆ ಮಾಡಬೇಕೆಂದು ಹೇಳಿದರು.
ಅಮೆರಿಕದ ಕ್ಷಿಪಣಿ ದಾಳಿಗಳು ಪ್ರತ್ಯುತ್ಪಾದಕವಾಗಿದ್ದು, ವಾಯವ್ಯ ಪಾಕಿಸ್ತಾನದಲ್ಲಿ ಇಸ್ಲಾಮ್ ಭಯೋತ್ಪಾದನೆಯನ್ನು ಉದ್ದೀಪನಗೊಳಿಸಿದೆಯೆಂದು ಪಾಕಿಸ್ತಾನ ಸರ್ಕಾರ ನಂಬಿರುವುದಾಗಿ ಅವರು ಹೇಳಿದರು.
'ಅವರು ಕೆಲವು ಯಶಸ್ವಿ ದಾಳಿಗಳನ್ನು ಮಾಡಿದ್ದಾರೆ. ಆದರೆ ಅದೇ ಸಂದರ್ಭದಲ್ಲಿ ಡ್ರೋನ್‌ಗಳಿಂದ ಕೆಲವು ಹಾನಿಗಳೂ ಸಂಭವಿಸಿದ್ದು, ಅಲ್ಲಿನ ಜನರನ್ನು ಕಳವಳಕ್ಕೀಡುಮಾಡಿದೆ. ಡ್ರೋನ್ ದಾಳಿ ಅವಶ್ಯಕವಾಗಿದ್ದರೆ ತಂತ್ರಜ್ಞಾನವನ್ನು ಪಾಕಿಸ್ತಾನಕ್ಕೆ ಹಸ್ತಾಂತರಿಸಬೇಕು. ಅದರಿಂದ ಪಾಕಿಸ್ತಾನದ ಜನರ ಕೆಲವು ವಿವಾದಗಳು ಇತ್ಯರ್ಥವಾಗುತ್ತವೆ' ಎಂದು ಹೇಳಿದ್ದಾರೆ. |