ಶ್ರೀಲಂಕಾ ಮಿಲಿಟರಿ ಮತ್ತು ಎಲ್‌ಟಿಟಿಇ ನಡುವೆ ಯುದ್ಧವಲಯದಲ್ಲಿ ಸಿಕ್ಕಿಬಿದ್ದಿರುವ ನಾಗರಿಕರಿಗೆ ನಿರಂತರ ಭೀತಿಯ ಛಾಯೆ ಆವರಿಸಿದ್ದು, ಆಹಾರ ಮತ್ತು ನೀರಿನ ಕೊರತೆ ಎದುರಿಸುತ್ತಿದ್ದಾರೆ. 'ನೀವು ಸೇನೆ ನಿಯಂತ್ರಿತ ಪ್ರದೇಶಕ್ಕೆ ದಾಟಿದರೆ ಸಾಯುವುದು ಖಚಿತ.
ಆದ್ದರಿಂದ ಅಲ್ಲಿ ಹೋಗಿ ಸಾಯುವ ಬದಲಿಗೆ ಇಲ್ಲೇ ನಮ್ಮ ಜತೆಗೆ ಸಾಯುವಂತೆ' ಎಲ್‌ಟಿಟಿಇ ತಿಳಿಸಿದ್ದಾಗಿ 48ರ ಪ್ರಾಯದ ರಾಸಮಲಾರ್ ತಿಳಿಸಿದ್ದಾರೆ. ಇಬ್ಬರು ಮಕ್ಕಳ ತಾಯಿಯಾದ ಆಕೆ ಭಾರೀ ಕದನದ ಯುದ್ಧವಲಯದಿಂದ ತಪ್ಪಿಸಿಕೊಂಡು ಸೇನೆ ನಿಯಂತ್ರಿತ ಪ್ರದೇಶಕ್ಕೆ ಪಲಾಯನ ಮಾಡಿದ್ದರು.
ವಾಯುನಿಯದ ಮಿಲಿಟರಿ ನಡೆಸುವ ಪುನರ್ವಸತಿ ಶಿಬಿರದಲ್ಲಿ ಅವರು ಮತ್ತು ಮಕ್ಕಳು ಇನ್ನೂ 1000 ಮಂದಿ ನಿರಾಶ್ರಿತರ ಸಮೇತ ಜೀವಿಸಿದ್ದಾರೆ. ಸರಕಾರಿ ನಿಯಂತ್ರಿತ ಪ್ರದೇಶಕ್ಕೆ ಇದುವರೆಗೆ 36,000ಕ್ಕೂ ಹೆಚ್ಚು ತಮಿಳರು ಎಲ್‌ಟಿಟಿಇಯ ಹಿಡಿತದಿಂದ ಪಾರಾಗಿ ಬಂದಿದ್ದಾರೆ.
ತಮಿಳು ನಾಗರಿಕರು ಶ್ರೀಲಂಕಾ ನಿಯಂತ್ರಿತ ಪ್ರದೇಶಗಳಿಗೆ ಹೋಗದಂತೆ ಅವರನ್ನು ಎಲ್‌ಟಿಟಿಇ ಬಲವಂತವಾಗಿ ಇರಿಸಿಕೊಂಡಿತ್ತು. ದೀರ್ಘ ಸಮಯದ ಬಳಿಕ ಕನಿಷ್ಠ ನಾನು ಮತ್ತು ಮಕ್ಕಳು ಗುಂಡಿನ ಮೊರತೆಗಳ ಸದ್ದಿನಿಂದ ಮತ್ತು ಬಂಕರ್ ಜೀವನದಿಂದ ಮುಕ್ತಿ ಪಡೆದಿದ್ದಾಗಿ ತಮಿಳು ನಿರಾಶ್ರಿತರಿಗೆ ತಾತ್ಕಾಲಿಕ ಮನೆಗಳಾಗಿ ಪರಿವರ್ತನೆಯಾದ ಶಾಲೆಯಲ್ಲಿ ರಾಸಮಲಾರ್ ತಿಳಿಸಿದರು.
'ತಾವು ಬಂಡುಕೋರರ ಕೋಪಕ್ಕೆ, ಸತತ ಆಕ್ರಮಣಕ್ಕೆ, ನಿರಂತರ ಭಯಕ್ಕೆ ಮತ್ತು ಆಹಾರ ಮತ್ತು ನೀರಿನ ಕೊರತೆಯಿಂದ ನರಳಿದ್ದಾಗಿ' ನಿರಾಶ್ರಿತರು ತಮ್ಮ ಕಷ್ಟ ತೋಡಿಕೊಂಡರು. 'ಅಲ್ಲಿ ತೀವ್ರ ಆಹಾರದ ಕೊರತೆಯಿದೆ. 15 ವರ್ಷ ಪ್ರಾಯದ ಬಾಲಕರನ್ನು ಕೂಡ ಎಲ್‌ಟಿಟಿಇ ಬಲವಂತವಾಗಿ ನೇಮಿಸಿಕೊಂಡಿದೆ. ಯುದ್ಧವಲಯದಿಂದ ತಪ್ಪಿಸಿಕೊಳ್ಳಲು ನಮಗೆ ಅವಕಾಶ ನೀಡುತ್ತಿರಲಿಲ್ಲ. ಸುಮಾರು ಎರಡು ಲಕ್ಷ ತಮಿಳರ ಪರಿಸ್ಥಿತಿ ಶೋಚನೀಯವಾಗಿದೆ' ಎಂದು ಸೆಲ್ವಕುಮಾರ್ ಹೇಳಿದ್ದಾರೆ. |