ದಂಗೆಯೆದ್ದಿರುವ ಗಡಿಭದ್ರತಾ ಯೋಧರು ತಕ್ಷಣವೇ ತಮ್ಮ ಶಸ್ತ್ರಾಸ್ತ್ರಗಳನ್ನು ಒಪ್ಪಿಸಿ ಶರಣಾಗದಿದ್ದರೆ ಉಗ್ರ ಕ್ರಮ ಕೈಗೊಳ್ಳುವುದಾಗಿ ಬಾಂಗ್ಲಾದೇಶ ಪ್ರಧಾನಮಂತ್ರಿ ಎಚ್ಚರಿಸಿದ್ದಾರೆ.
'ನಿಮ್ಮ ಬಂದೂಕುಗಳನ್ನು ಒಪ್ಪಿಸಿ ಬ್ಯಾರಕ್‌ಗಳಿಗೆ ಹಿಂತಿರುಗಿ' ಎಂದು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುತ್ತಾ ಶೇಖ್ ಹಸೀನಾ ಸೈನಿಕರಿಗೆ ಆದೇಶಿಸಿದ್ದಾರೆ. 'ನನ್ನ ಸಹನೆಯನ್ನು ಪರೀಕ್ಷಿಸಬೇಡಿ ಮತ್ತು ಕಠಿಣ ಕ್ರಮ ಕೈಗೊಳ್ಳಲು ನನ್ನನ್ನು ದೂಡಬೇಡಿ' ಎಂದು ಹಸೀನಾ ಎಚ್ಚರಿಸಿದರು.
ಢಾಕಾದಲ್ಲಿ ಅರೆಮಿಲಿಟರಿ ಪಡೆಗಳಿಂದ ಆರಂಭವಾದ ಬಂಡಾಯ ಶಮನವಾದರೂ ರಾಜಧಾನಿಯ ಹೊರಗೆ ಬಂಡಾಯದ ಹೊಗೆ ಆವರಿಸಿತ್ತು. ವೇತನ ಮತ್ತಿತರ ಸ್ಥಿತಿಗತಿಗಳ ಬಗ್ಗೆ ಅಸಮಾಧಾನ ಸೂಚಿಸಿ ಬಂಡಾಯವೆದ್ದಿರುವ ಬಾಂಗ್ಲಾದೇಶ ರೈಫಲ್ಸ್ ಮತ್ತು ಸೇನೆ ನಡುವೆ ಕದನದಲ್ಲಿ ಸುಮಾರು 50 ಜನರು ಬುಧವಾರ ಬಲಿಯಾಗಿದ್ದಾರೆ.
ಸರ್ಕಾರ ಕ್ಷಮಾದಾನದ ಪ್ರಸ್ತಾಪ ಮಾಡಿ ಅವರ ಕುಂದುಕೊರತೆಗಳ ಕಡೆ ಗಮನಹರಿಸುವುದಾಗಿ ಪ್ರಧಾನಮಂತ್ರಿ ವಾಗ್ದಾನ ನೀಡಿದ್ದರಿಂದ ಬಂಡಾಯ ಶಮನವಾಗಿತ್ತು. ಆದಾಗ್ಯೂ, ಗುರುವಾರ ಪುನಃ ಗಡಿಭದ್ರತಾ ಪಡೆಯ ಬ್ಯಾರಕ್‌ಗಳಲ್ಲಿ ಗುಂಡಿನ ಮೊರೆತ ಮರುಕಳಿಸಿತು. ಗುರುವಾರ ಮುಂಜಾನೆಯಿಂದ ಕನಿಷ್ಠ 12 ವಿವಿಧ ನಗರಗಳಲ್ಲಿ ಮತ್ತು ಪಟ್ಟಣಗಳಲ್ಲಿ ಬ್ಯಾರಕ್‌ಗಳು ಮತ್ತು ಶಿಬಿರಗಳನ್ನು ಸೈನಿಕರು ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾಗಿ ವರದಿಯಾಗಿದೆ. ಬಾರ್ಡರ್ ರೈಫಲ್ ಸೈನಿಕರು ರಾಷ್ಟ್ರದ 42 ಶಿಬಿರಗಳಲ್ಲಿ ಸುಮಾರು 40,000 ದಷ್ಟಿದ್ದಾರೆ. |