ಇಸ್ಲಾಮಿಕ್ ಷರಿಯತ್ ಕಾನೂನು ಜಾರಿ ಸಹಿತ ತಾಲಿಬಾನ್ ಜತೆ ಶಾಂತಿ ಒಪ್ಪಂದ ಮಾಡಿಕೊಂಡಿದ್ದರೂ ಸ್ವಾಟ್ ಕಣಿವೆಯಲ್ಲಿ ಅಲ್ ಖೈದಾ ಉಪಸ್ಥಿತಿಯನ್ನು ಸಹಿಸುವುದಿಲ್ಲ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವರು ಶಪಥ ಮಾಡಿದ್ದಾರೆ.
ಪಾಕಿಸ್ತಾನದ ರಾಜಧಾನಿಯಿಂದ 160 ಕಿಮೀ ದೂರವಿರುವ ಪ್ರಕೃತಿಸೌಂದರ್ಯದ ಕಣಿವೆಯು ಆಫ್ಘಾನಿಸ್ತಾನದಂತೆ ಉಗ್ರಗಾಮಿಗಳಿಗೆ ಸುರಕ್ಷಿತ ಸ್ವರ್ಗವಾಗಬಹುದೆಂಬ ಪಾಶ್ಚಿಮಾತ್ಯ ರಾಷ್ಟ್ರಗಳ ಕಳವಳಕ್ಕೆ ಅವರು ಪ್ರತ್ಯುತ್ತರ ನೀಡಿದರು. ಅಲ್ ಖೈದಾ ಉಪಸ್ಥಿತಿ ನಗಣ್ಯ ಎಂದು ಹೇಳಿದ ಶಾ ಮಹ್ಮದ್ ಖುರೇಷಿ, 'ಪಾಕಿಸ್ತಾನದಲ್ಲಿ ತಾಲಿಬಾನ್ ಉಸ್ತುವಾರಿಯಿಲ್ಲ. ತಾಲಿಬಾನ್ ಜತೆ ನಾವು ರಾಜಿ ಮಾಡಿಕೊಳ್ಳುತ್ತಿಲ್ಲ' ಎಂದು ಸ್ಪಷ್ಟಪಡಿಸಿದರು. 'ಅಲ್ ಖೈದಾವನ್ನು ನಾವು ಸ್ವಾಟ್ ಕಣಿವೆಯಿಂದ ಹೊರಗಟ್ಟಿದ್ದೇವೆ.
ಬುಡಕಟ್ಟು ಪ್ರದೇಶದಿಂದ ನಾವು ಅದನ್ನು ಅಟ್ಟುವುದಾಗಿ' ವಾಷಿಂಗ್ಟನ್ನಿಗೆ ಆಗಮಿಸಿರುವ ಶಾ ಮಹ್ಮದ್ ಖುರೇಷಿ ತಿಳಿಸಿದರು. ಬಾಲಕಿಯರ ಶಾಲೆಗಳನ್ನು ಬಲವಂತದಿಂದ ಮುಚ್ಚುವುದು ಮತ್ತು ಮನರಂಜನೆಗೆ ಕಡಿವಾಣ ಹಾಕುವ ಮೂಲಕ ಎರಡು ವರ್ಷಗಳ ಕಾಲದ ರಕ್ತಪಾತದ ಆಂದೋಳನ ನಡೆಸಿದ ಇಸ್ಲಾಮಿಕ್ ತಾಲಿಬಾನ್ ಉಗ್ರರ ಜತೆ ಸ್ವಾಟ್ ಕಣಿವೆಯಲ್ಲಿ ಕದನವಿರಾಮಕ್ಕೆ ಪಾಕಿಸ್ತಾನ ಸರ್ಕಾರ ಒಪ್ಪಿಕೊಂಡಿದೆ.
ಬಾಲಕಿಯರ ಶಾಲೆ ಪುನಾರಂಭಿಸುವಂತೆ ಪಾಕಿಸ್ತಾನ ಬಯಸಿರುವುದಾಗಿ ಖುರೇಷಿ ಹೇಳಿದ್ದು, ಶರಿಯತ್ ಒಪ್ಪಂದವು ಸ್ಥಳೀಯವಾಗಿದ್ದು, ಉತ್ತಮ ನ್ಯಾಯ ನೀಡುವ ಗುರಿ ಹೊಂದಿದೆ ಎಂದು ನುಡಿದರು.
|