ಪಾಕಿಸ್ತಾನದ ಪ್ರತಿಷ್ಠಿತ ಐಶಾರಾಮಿ ಹೋಟೆಲ್ ಮಾರಿಯೇಟ್‌ನಲ್ಲಿ ಗುರುವಾರ ಶಾರ್ಟ್ ಸರ್ಕ್ಯೂಟ್‌ನಿಂದ ಭಾರೀ ಅಗ್ನಿ ಅನಾಹುತ ಸಂಭವಿಸಿದ್ದು, ಒಂಬತ್ತು ಮಂದಿ ಗಾಯಗೊಂಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಮಾರಿಯೇಟ್ ಹೋಟೆಲ್‌ಗೆ ಉಗ್ರಗಾಮಿಗಳು ಆತ್ಮಹತ್ಯಾ ದಾಳಿ ನಡೆಸುವ ಮೂಲಕ 50ಕ್ಕೂ ಹೆಚ್ಚು ಜನರು ಸಾವನ್ನಪ್ಪಿ, ಸಾಕಷ್ಟು ನಷ್ಟ ಉಂಟಾಗಿದ್ದು, ಪ್ರಕರಣ ನಡೆದ ಐದು ತಿಂಗಳ ಬಳಿಕ ಇದೀಗ ಹೋಟೆಲ್‌ನೊಳಗೆ ಅಗ್ನಿ ದುರಂತ ಸಂಭವಿಸಿದೆ.
ಹೋಟೆಲ್‌ನ ಹಲವು ಮಹಡಿಗಳಿಗೂ ಬೆಂಕಿ ಹೊತ್ತಿಕೊಂಡಿದ್ದು, ಎಲ್ಲೆಡೆ ಹೊಗೆ ಆವರಿಸಿಕೊಂಡಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಘಟನಾ ಪ್ರದೇಶಕ್ಕೆ ಹಲವಾರು ಅಗ್ನಿಶಾಮಕ ದಳ ಆಗಮಿಸಿದ್ದು, ಬೆಂಕಿಯನ್ನು ನಂದಿಸುವ ಕಾರ್ಯದಲ್ಲಿ ತೊಡಗಿವೆ.
ಹೋಟೆಲ್ ಪುನರ್ ನವೀಕರಣ ಕೆಲಸ ನಡೆಯುತ್ತಿದ್ದು, ಬೆಂಕಿ ಆಕಸ್ಮಿಕ ಘಟನೆಯಿಂದಾಗಿ ಹಲವಾರು ಮಂದಿ ಗಾಯಗೊಂಡಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದು, ಕೆಲವರು ಪ್ರಜ್ಞೆ ತಪ್ಪಿ ಕೆಳಕ್ಕೆ ಬಿದ್ದಿರುವುದಾಗಿ ಹೇಳಿದ್ದಾರೆ.
ಅಗ್ನಿ ದುರಂತದಲ್ಲಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ದಳಗಳು ಹರಸಾಹಸ ಪಡುತ್ತಿರುವುದಾಗಿ ಪ್ರತ್ಯಕ್ಷದರ್ಶಿಗಳು ವಿವರಿಸಿದ್ದಾರೆ. |