ವೇತನ ತಾರತಮ್ಯದ ವಿರುದ್ಧ ದಂಗೆಯೆದ್ದ ಬಾಂಗ್ಲಾದೇಶದ ಸಾವಿರಾರು ಗಡಿಭದ್ರತಾ ಯೋಧರು ಗುರುವಾರ ಶರಣಾಗಿದ್ದರಿಂದ ಇನ್ನಷ್ಟು ರಕ್ತಪಾತವಾಗುವುದು ತಪ್ಪಿದೆ.
ಪ್ರಧಾನ ಮಂತ್ರಿ ಶೇಖ್ ಹಸೀನಾ 'ನೀವು ಆತ್ಮಹತ್ಯೆಯ ಮಾರ್ಗ ಹಿಡಿದಿದ್ದು ರಕ್ತಪಾತದಲ್ಲಿ ಅಂತ್ಯಗೊಳ್ಳುತ್ತದೆಂದು' ಎಚ್ಚರಿಸಿದ ಬಳಿಕ ಎಲ್ಲ ಸೈನಿಕರು ಶರಣಾಗಿ ಶಸ್ತ್ರಾಸ್ತ್ರ ಒಪ್ಪಿಸಿದ್ದಾರೆಂದು ಪ್ರಧಾನಿ ವಕ್ತಾರ ಅಬ್ದುಲ್ ಕಲಾಂ ಅಜಾದ್ ತಿಳಿಸಿದ್ದಾರೆ.
ಢಾಕಾದ ಬಿಡಿಆರ್ ಮುಖ್ಯಕಚೇರಿಯಲ್ಲಿ ಸೆರೆಹಿಡಿದ ಎಲ್ಲ ಒತ್ತೆಯಾಳುಗಳನ್ನು ಬಂಧಮುಕ್ತ ಮಾಡಲಾಗಿದೆಯೆಂದು ಅವರು ತಿಳಿಸಿದ್ದಾರೆ. ಸತ್ತವರ ಸಂಖ್ಯೆ 11 ಎಂದುಅಧಿಕೃತ ಅಂಕಿಅಂಶಗಳು ತಿಳಿಸಿದ್ದು, ಹತ್ತಾರು ಮಂದಿ ಗಾಯಗೊಂಡಿದ್ದಾರೆ. ಇದಕ್ಕೆ ಮುಂಚೆ ಸಚಿವರೊಬ್ಬರು 50ಕ್ಕೂ ಹೆಚ್ಚು ಅಧಿಕಾರಿಗಳು ಸತ್ತಿದ್ದಾರೆಂದು ಹೇಳಿಕೆಯಲ್ಲಿ ತಿಳಿಸಿದ್ದರು.
ಹೆಚ್ಚಿನ ವೇತನ, ಸಬ್ಸಿಡಿಯ ಆಹಾರ ಮತ್ತು ರಜಗಳನ್ನು ನೀಡಬೇಕೆಂಬ ಸೈನಿಕರ ಮನವಿಯನ್ನು ಹಿರಿಯ ಅಧಿಕಾರಿಗಳು ತಳ್ಳಿಹಾಕಿದ ಬಳಿಕ ಕೆಲವಾರು ತಿಂಗಳಿಂದ ಬೂದಿಮುಚ್ಚಿದ ಕೆಂಡದಂತಿದ್ದ ಕೋಪಾಗ್ನಿ ಭುಗಿಲೆದ್ದು ಹಿಂಸಾಚಾರಕ್ಕೆ ನಾಂದಿ ಹಾಡಿತು.
ಶೇಖ್ ಹಸೀನಾ ತಮ್ಮ ಟೆಲಿವಿಷನ್ ಭಾಷಣದಲ್ಲಿ ದಂಗೆಯನ್ನು ಬಲಾತ್ಕಾರದಿಂದ ಅಡಗಿಸುವುದಾಗಿ ಎಚ್ಚರಿಸಿದರು.'ಆತ್ಮಹತ್ಯೆ ದಾರಿ ಹಿಡಿಯಬೇಡಿ. ಕಠಿಣ ಕ್ರಮ ಕೈಗೊಳ್ಳುವಂತೆ ನನ್ನನ್ನು ದೂಡಬೇಡಿ. ನಿಮ್ಮ ಸಮಸ್ಯೆಗಳು ನನಗೆ ತಿಳಿದಿವೆ. ದಯವಿಟ್ಟು ಸಹಾಯ ಮಾಡಿ' ಎಂದು ಕಠಿಣ ಸಂದೇಶದ ಜತೆ ಮನವಿಯನ್ನೂ ಬೆರೆಸಿದ್ದರು. ಹಸೀನಾ ಭಾಷಣದ ಬಳಿಕ ಸೇನೆಯು ಬಿಡಿಆರ್ ನೆಲೆಯ ಸಮೀಪದಲ್ಲೇ ಸೇನೆ ಟ್ಯಾಂಕ್ ಮತ್ತು ಶಸಸ್ತ್ರ ಸಿಬ್ಬಂದಿ ವಾಹನಗಳು ಸಜ್ಜಾಗಿದ್ದವು. |