ಇರಾಕ್ ಮತ್ತು ಆಫ್ಘಾನಿಸ್ತಾನದಲ್ಲಿ ಉಗ್ರಗಾಮಿಗಳ ವಿರುದ್ಧ ಸಮರದಲ್ಲಿ ಮೃತಪಟ್ಟ ಸೈನಿಕರ ಬಗ್ಗೆ ಮಾಧ್ಯಮದಲ್ಲಿ ಪ್ರಸಾರ ಮಾಡುವ ನಿರ್ಧಾರ ಅವರ ಕುಟುಂಬಗಳಿಗೆ ಸೇರಿದ್ದೆಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ರಾಬರ್ಟ್ ಗೇಟ್ಸ್ ಪ್ರಕಟಿಸಿದ್ದಾರೆ.
ಯುದ್ಧದಲ್ಲಿ ಆಕಸ್ಮಿಕವಾಗಿ ಮೃತಪಟ್ಟ ಅಮೆರಿಕದ ಯೋಧರ ಮೃತ ಶರೀರಗಳನ್ನು ಡೋವರ್ ವಾಯುನೆಲೆಗೆ ಒಯ್ಯಲಾಗುತ್ತಿದ್ದು, ಮೃತದೇಹಗಳನ್ನು ತರುವ ಪ್ರಕ್ರಿಯೆಯನ್ನು ವಿಡಿಯೋ ಚಿತ್ರೀಕರಣ ಮಾಡಿ ಅಥವಾ ಛಾಯಾಚಿತ್ರ ತೆಗೆದು ಮಾಧ್ಯಮಗಳಲ್ಲಿ ಪ್ರಚಾರ ನೀಡುವುದಕ್ಕೆ ಇಲ್ಲಿಯವರೆಗೆ ಸಂಪೂರ್ಣ ನಿಷೇಧ ಹೇರಲಾಗಿತ್ತು. ರಕ್ಷಣಾ ಇಲಾಖೆಯ ಇಂತಹ ನೀತಿಯನ್ನು ಪುನರ್‌ಪರಿಶೀಲನೆ ಮಾಡುವಂತೆ ಒಬಾಮಾ ಈ ತಿಂಗಳಾರಂಭದಲ್ಲಿ ಆದೇಶಿಸಿದ್ದರು. ಕಾರ್ಯದರ್ಶಿ ನಿರ್ಧಾರಕ್ಕೆ ಅಧ್ಯಕ್ಷರು ಒತ್ತಾಸೆಯಾಗಿದ್ದಾರೆಂದು ಶ್ವೇತಭವನದ ವಕ್ತಾರ ರಾಬರ್ಟ್ ಗಿಬ್ಸ್ ತಿಳಿಸಿದರು.
ಮಿಲಿಟರಿ ಕುಟುಂಬಗಳನ್ನು ಪ್ರತಿನಿಧಿಸುವ ಸಂಘಟನೆಗಳು ಮತ್ತು ಮಿಲಿಟರಿ ಸೇವೆಗಳ ಸಹಿತ, ಅನೇಕ ಮೂಲಗಳಿಂದ ಮಾಹಿತಿ ಸಂಗ್ರಹಿಸಿದ ಬಳಿಕ, ಡೋವರ್‌ಗೆ ಗೌರವಾನ್ವಿತವಾಗಿ ಮೃತದೇಹ ಸಾಗಿಸುವ ಪ್ರಕ್ರಿಯೆಗೆ ಅದರಿಂದ ನೇರ ಪರಿಣಾಮ ತಟ್ಟಿದ ಕುಟುಂಬದವರು ಮಾಧ್ಯಮದ ಕವರೇಜ್ ನೀಡುವ ನಿರ್ಧಾರ ಕೈಗೊಳ್ಳುತ್ತಾರೆಂದು ಪೆಂಟಗಾನ್ ಪತ್ರಿಕಾಗೋಷ್ಠಿಯಲ್ಲಿ ಗೇಟ್ಸ್ ತಿಳಿಸಿದರು.
ಮೃತರ ಕುಟುಂಬಕ್ಕೆ ಮೃತದೇಹಗಳ ಗೌರವಾನ್ವಿತ ವರ್ಗಾವಣೆ ಪ್ರಕ್ರಿಯೆಗೆ ಮಾಧ್ಯಮ ಪ್ರಸಾರ ಇಷ್ಟವಾಗದಿದ್ದರೆ ಅದನ್ನು ಕೈಗೊಳ್ಳುವುದಿಲ್ಲ. ಅವರಿಗೆ ಇಷ್ಟವಾಗಿದ್ದರೆ ಮಾತ್ರ ಮಾಧ್ಯಮದಲ್ಲಿ ಪ್ರಚಾರ ನೀಡುವುದಾಗಿ ಅವರು ಹೇಳಿದರು. |