ಸಿಪಾಯಿದಂಗೆಯಲ್ಲಿ ಬಾಂಗ್ಲಾದೇಶ ರೈಫಲ್ಸ್ ಸೈನಿಕರು ಒತ್ತೆಯಾಳಾಗಿ ಇರಿಸಿಕೊಂಡ ಸುಮಾರು 130 ಸೇನಾಧಿಕಾರಿಗಳು ಶುಕ್ರವಾರ ನಾಪತ್ತೆಯಾಗಿದ್ದಾರೆ. ಸೈನಿಕರು ಶರಣಾಗಿದ್ದರಿಂದ ರಕ್ತದೋಕುಳಿಗೆ ತೆರೆಬಿದ್ದರೂ ಬಿಡಿಆರ್ ಮುಖ್ಯಸ್ಥ ಸೇರಿದಂತೆ 100ಕ್ಕೂ ಹೆಚ್ಚು ಜನರ ಸಾವಿನಲ್ಲಿ ಅಂತ್ಯಕಂಡಿದೆ.
ದಂಗೆಪೀಡಿತ ಬಿಡಿಆರ್ ಕೇಂದ್ರದಲ್ಲಿ ಮೃತದೇಹಗಳಿಗೆ ತೀವ್ರ ಹುಡುಕಾಟ ರಾತ್ರಿಯಿಡೀ ಸಾಗಿತ್ತು. ಸುಮಾರು 130 ಸೇನಾಧಿಕಾರಿಗಳು ಇನ್ನೂ ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ ಅಧಿಕೃತವಾಗಿ ದೃಢಪಟ್ಟಿಲ್ಲವಾದರೂ ಸುಮಾರು 100 ಜನರು ದಂಗೆಯಲ್ಲಿ ಮೃತಪಟ್ಟಿರಬಹುದೆಂದು ಭದ್ರತಾ ಮೂಲಗಳು ಹೇಳಿವೆ. ಬಿಡಿಆರ್ ಮುಖ್ಯಸ್ಥ ಮೇಜರ್ ಜನರಲ್ ಶಕೀಲ್ ಅಹ್ಮದ್ ಸಾವನ್ನು ಬದುಕುಳಿದವರು ದೃಢಪಡಿಸಿದ್ದಾರೆ.
ಹಿರಿಯ ಅಧಿಕಾರಿಗಳೊಂದಿಗೆ ಸೈನಿಕರ 'ದರ್ಬಾರ್' ನಡೆಯುತ್ತಿದ್ದಾಗಲೇ ದಂಗೆಯೆದ್ದ ಸೈನಿಕರು ಗುಂಡಿನ ಮಳೆಗರೆದಿದ್ದರಿಂದ ಶಕೀಲ್ ಸಾವನ್ನಪ್ಪಿದರು. ದಂಗೆ ಆರಂಭವಾಗುತ್ತಿದ್ದಂತೆ ದರ್ಬಾರ್ ಹಾಲ್‌ನಿಂದ ಹೊರಕ್ಕೆ ತೆರಳಿದ ಶಕೀಲ್ ಅಹ್ಮದ್‌ರತ್ತ ನಾಲ್ವರು ಸೈನಿಕರು ಮುಂದೆ ಹಾರಿ ತಕ್ಷಣವೇ ಗುಂಡಿಕ್ಕಿದರೆಂದು ಲೆಫ್ಟಿನೆಂಟ್ ಕರ್ನಲ್ ಕಮ್ರುಜಾಮನ್ ವರದಿಗಾರರಿಗೆ ತಿಳಿಸಿದರು. |