ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ನವಾಜ್ ಷರೀಫ್ ಮತ್ತು ಸೋದರ ಶಾಬಾಜ್ ಚುನಾವಣೆಗೆ ಸ್ಪರ್ಧಿಸದಂತೆ ಕೋರ್ಟ್ ನಿಷೇಧಿಸಿದ ಹಿನ್ನೆಲೆಯಲ್ಲಿ ಷರೀಫ್ ಬೆಂಬಲಿಗರಿಂದ ಹಿಂಸಾಚಾರ ಭುಗಿಲೆದ್ದಿದೆ. ಮುಖ್ಯನಗರಗಳಲ್ಲಿ ರಸ್ತೆತಡೆ ವಿಧಿಸಲಾಗಿದ್ದು, ಅಂಗಡಿಗಳಿಗೆ ಮತ್ತು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ರಾವಲ್ಪಿಂಡಿ ಬಳಿ ಷರೀಫ್ ಬೆಂಬಲಿಗರು ಮತ್ತು ಪೊಲೀಸರ ನಡುವೆ ಘರ್ಷಣೆ ಸಂಭವಿಸಿದ್ದು, ಕೆಲವರು ಗಾಯಗೊಂಡಿದ್ದಾರೆಂದು ಖಚಿತಪಡಿಸದ ವರದಿಯೊಂದು ತಿಳಿಸಿದೆ.
ಅಧ್ಯಕ್ಷ ಜರ್ದಾರಿ ತಮ್ಮ ರಾಜಕೀಯ ಜೀವನ ಮುಗಿಸಲು ಕೋರ್ಟ್ ತೀರ್ಪಿನ ಮೇಲೆ ಪ್ರಭಾವ ಬೀರಿದ್ದಾರೆಂದು ಷರೀಫ್ ಆರೋಪಿಸಿದ್ದು, ಪಾಕಿಸ್ತಾನದಲ್ಲಿ ಮತ್ತೊಮ್ಮೆ ರಾಜಕೀಯ ಕ್ಷೋಭೆ ಉಂಟಾಗುವ ಭೀತಿಯ ಛಾಯೆ ಆವರಿಸಿದೆ. ಷರೀಫ್ ಅವರ ಪಿಎಂಎಲ್-ಎನ್ ಪಕ್ಷದ ಅಧಿಕಾರವು ಪಂಜಾಬ್ ಪ್ರಾಂತ್ಯದಲ್ಲಿ ಕೇಂದ್ರೀಕೃತವಾಗಿದ್ದು, ಅಲ್ಲಿ ಸೋದರ ಶಾಬಾಜ್ ಮುಖ್ಯಮಂತ್ರಿಯಾಗಿದ್ದರು. ಕೋರ್ಟ್ ತೀರ್ಪಿನ ಬಳಿಕ ಅವರಿಗೆ ಅಧಿಕಾರ ತ್ಯಜಿಸಲು ಸೂಚಿಸಲಾಗಿದ್ದು, ಷರೀಫ್ ಮತ್ತು ಫೆಡರಲ್ ಸರ್ಕಾರದ ನಡುವೆ ಬಿರುಕು ಇನ್ನಷ್ಟು ಆಳವಾಗಲಿದೆಯೆಂದು ವರದಿಗಾರರು ಹೇಳಿದ್ದಾರೆ.
ಸಾವಿರಾರು ಪ್ರತಿಭಟನೆಕಾರರು ಹಸಿರು ಧ್ವಜಗಳನ್ನು ಬೀಸುತ್ತಾ, ಟೈರ್‌ಗಳನ್ನು ಸುಟ್ಟಿದ್ದರಿಂದ ದಟ್ಟವಾದ ಹೊಗೆ ಆಕಾಶವನ್ನು ಮುಸುಕಿತ್ತು. ರಾವಲ್ಪಿಂಡಿಯ ಗ್ಯಾರಿಸನ್ ನಗರದಲ್ಲಿ ಗಂಭೀರ ಸ್ವರೂಪದ ಘರ್ಷಣೆಗಳು ಸಂಭವಿಸಿದ್ದು, ಬ್ಯಾಂಕುಗಳು ಮತ್ತು ಅಂಗಡಿಗಳ ಮೇಲೆ ದಾಳಿ ಮಾಡಿದ್ದಾರೆ. ವಾಹನಗಳಿಗೆ ಬೆಂಕಿ ಹಚ್ಚಿ ರಸ್ತೆತಡೆ ನಡೆಸಿದರು. ಎರಡು ಪೊಲೀಸ್ ವಾಹನಗಳಿಗೂ ಬೆಂಕಿಬಿದ್ದಿದೆ. |