ಪಾಕಿಸ್ತಾನದ ಸ್ವಾತ್ ಕಣಿವೆಯಲ್ಲಿ ತಾಲಿಬಾನ್ ಉಗ್ರಗಾಮಿಗಳು ಮತ್ತು ಸರ್ಕಾರದ ನಡುವೆ ಶಾಂತಿ ಒಪ್ಪಂದ ಕುರಿತಂತೆ ಯಾವುದೇ ಆತುರದ ನಿರ್ಧಾರ ಕೈಗೊಳ್ಳದೇ ಕಾದುನೋಡುವ ನೀತಿಯನ್ನು ಅಮೆರಿಕ ಅನುಸರಿಸಲಿದೆ ಎಂದು ಒಬಾಮಾ ಆಡಳಿತದ ಉನ್ನತ ಮಿಲಿಟರಿ ಮತ್ತು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.
ಅಮೆರಿಕಕ್ಕೆ ಭೇಟಿ ನೀಡಿರುವ ಸೇನಾ ಮುಖ್ಯಸ್ಥ ಜನರಲ್ ಅಸ್ಫಾಖ್ ಕಿಯಾನಿ ಜತೆ ವ್ಯಾಪಕ ಮಾತುಕತೆ ನಡೆಸಿದ್ದಾಗಿ ಪೆಂಟಗನ್ ಪತ್ರಿಕಾಗೋಷ್ಠಿಯಲ್ಲಿ ರಕ್ಷಣಾ ಕಾರ್ಯದರ್ಶಿ ರಾಬರ್ಟ್ ಗೇಟ್ಸ್ ಮತ್ತು ಸಿಬ್ಬಂದಿ ಜಂಟಿ ಮುಖ್ಯಸ್ಥ ಅಡ್ಮಿರಲ್ ಮೈಕ್ ಮುಲ್ಲನ್ ತಿಳಿಸಿದರು.
ನಮ್ಮ ನಡುವೆ ಸ್ವಾತ್ ಒಪ್ಪಂದದ ಕಥೆಗಳು ಸೇರಿದಂತೆ ವ್ಯಾಪಕ ಮಾತುಕತೆ ನಡೆಯಿತು ಎಂದು ಕಯಾನಿ ಜತೆ ಭೇಟಿಯನ್ನು ಉಲ್ಲೇಖಿಸಿ ಮುಲ್ಲನ್ ತಿಳಿಸಿದರು. "ಆದ್ದರಿಂದ ಶಾಂತಿ ಒಪ್ಪಂದ ಹೇಗೆ ತಿರುವು ಪಡೆಯುತ್ತದೆಂದು ನಾವು ನಿಗಾವಹಿಸುತ್ತೇವೆ. ಪಾಕ್ ಸಾರ್ವಭೌಮ ರಾಷ್ಟ್ರವಾಗಿದ್ದು, ಅಂತಹ ನಿರ್ಧಾರ ಕೈಗೊಳ್ಳುವ ಸ್ವಾತಂತ್ರ್ಯ ಹೊಂದಿದೆ. ಆದರೆ ಸ್ವಾತ್‌ನಲ್ಲಿ ಏನಾಗುತ್ತಿದೆಯೆಂದು ತಾವು ಓದಿದ್ದೆಲ್ಲವನ್ನೂ ನಂಬುವುದಿಲ್ಲ. ಆದ್ದರಿಂದ ತಾವು ಇನ್ನಷ್ಟು ಆಳವಾಗಿ ಅಲ್ಲಿನ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುವುದಾಗಿ" ಅವರು ಹೇಳಿದರು. |