ಬಾಂಗ್ಲಾದೇಶದ ಸೇನಾ ಮುಖ್ಯಕಾರ್ಯಾಲಯದಲ್ಲಿ ಹತರಾದ ಸೇನಾಧಿಕಾರಿಗಳ ಸಾಮೂಹಿಕ ಗೋರಿ ಪತ್ತೆಯಾಗುವುದರೊಂದಿಗೆ ಬಾಂಗ್ಲಾ ಸಿಪಾಯಿ ದಂಗೆ ಪ್ರಕರಣ ಭಯಾನಕ ಸ್ವರೂಪವನ್ನು ಪಡೆದುಕೊಂಡಿದ್ದು, ಘಟನೆಗೆ ಕುರಿತಂತೆ ತನಿಖೆಗೆ ಆದೇಶ ನೀಡುವುದಾಗಿ ಪ್ರಧಾನಿ ಶೇಖ್ ಹಸೀನಾ ತಿಳಿಸಿದ್ದಾರೆ.
ಭದ್ರತಾ ಪಡೆಗಳು ಸುಮಾರು 30 ಸೇನಾಧಿಕಾರಿಗಳ ಸಾಮೂಹಿಕ ಗೋರಿಯನ್ನು ಪತ್ತೆಮಾಡಿದ್ದು, ಸೈನಿಕರು ಮತ್ತು ಪೊಲೀಸ್ ಶ್ವಾನದಳ ಇನ್ನೂ ನಾಪತ್ತೆಯಾದ 130 ಅಧಿಕಾರಿಗಳಿಗಾಗಿ ಶೋಧ ನಡೆಸಿದ್ದಾರೆಂದು ಅಧಿಕೃತ ಮೂಲಗಳು ಹೇಳಿವೆ.
ಬಂಡೆದ್ದ ಸೈನಿಕರು ಸೇನಾಧಿಕಾರಿಗಳ ಸಭೆ ಮೇಲೆ ಗುಂಡಿನ ಮಳೆಗರೆದು ಅನೇಕ ಮಂದಿಯನ್ನು ಕೊಂದ ಈ ಘಟನೆಯಿಂದ ಬಾಂಗ್ಲಾದಲ್ಲಿ ಆತಂಕದ ಛಾಯೆ ಕವಿದಿದೆ. ಸೇನಾಧಿಕಾರಿಗಳ ಹತ್ಯಾಕಾಂಡ ಬಾಂಗ್ಲಾದೇಶದ ಇತಿಹಾಸದಲ್ಲೇ ಆಘಾತಕಾರಿ ವಿದ್ಯಮಾನ ಎಂದು ಪ್ರಧಾನಿ ಹಸೀನಾ ತಿಳಿಸಿದ್ದು, ದಂಗೆಗೆ ಕಾರಣಗಳ ತನಿಖೆಗೆ ಆದೇಶ ನೀಡುವುದಾಗಿ ಹೇಳಿದ್ದಾರೆ.
ಮಾರಣಹೋಮದಲ್ಲಿ ನೇರವಾಗಿ ಭಾಗಿಯಾದ ಸೈನಿಕರಿಗೆ ಕ್ಷಮೆಯಿಲ್ಲ ಎಂದು ತಿಳಿಸಿದ ಹಸೀನಾ, ಅವರು ಕ್ಷಮಾದಾನದ ವ್ಯಾಪ್ತಿಗೆ ಬರುವುದಿಲ್ಲವೆಂದು ನುಡಿದರು. ಅನೇಕ ಮಂದಿ ಸೇನಾಧಿಕಾರಿಗಳ ನಿರ್ದಯ ಹತ್ಯೆಯು ದಂಗೆಯ ಆಘಾತಕಾರಿ ವಿಷಯವಾಗಿದ್ದು, ಎಲ್ಲ ಬಿಡಿಆರ್ ಸೈನಿಕರು ಹತ್ಯೆಯಲ್ಲಿ ಭಾಗಿಯಾಗದಂತೆ ಕಾಣುತ್ತಿಲ್ಲ ಎಂದು ಹೇಳಿದ್ದಾರೆ.
ಕ್ರೂರ ಉದ್ದೇಶದಿಂದ ಸೈನಿಕರಲ್ಲಿ ಒಂದು ನಿರ್ದಿಷ್ಟ ಗುಂಪು ಹತ್ಯಾಕಾಂಡ ನಡೆಸಿದೆಯೆಂದು ಅವರು ಸಂಶಯ ವ್ಯಕ್ತಪಡಿಸಿದರು. ಬಂಡಾಯವನ್ನು ಹತ್ತಿಕ್ಕಲು ಸೇನೆಯನ್ನು ಸನ್ನದ್ಧವಾಗಿಡಲಾಗಿತ್ತು ಎಂದು ಹೇಳಿದ ಅವರು, ಬಂಡಾಯಗಾರರನ್ನು ತಣಿಸಲು ಮಾತುಕತೆ ನಡೆಯುತ್ತಿದೆಯೆಂದು ಹೇಳಿದರು. ಅಧಿಕಾರಿಗಳ ಸಿಕ್ಕಿಬಿದ್ದ ಕುಟುಂಬವನ್ನು ಮತ್ತು ಸೆರೆಯಾಳುಗಳನ್ನು ರಕ್ಷಿಸುವುದು ನಮ್ಮ ಮುಖ್ಯಕಾಳಜಿಯಾಗಿದೆ ಎಂದು ಅವರು ಹೇಳಿದರು. |