ಇರಾಕ್‌ನಿಂದ ಎಲ್ಲ ಪಡೆಗಳನ್ನು 2011ರೊಳಗೆ ಹಿಂತೆಗೆದುಕೊಳ್ಳುವುದಾಗಿ ಗಡುವನ್ನು ಪ್ರಕಟಿಸಿರುವ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ಮೇಲೆ ಮರುಗಮನ ನೀಡಲು ಈಗ ಕಾಲ ಪಕ್ವವಾಗಿದೆ ಎಂದು ಹೇಳಿದ್ದಾರೆ.
ಆಫ್ಘಾನಿಸ್ತಾನಕ್ಕೆ 17000 ಹೆಚ್ಚುವರಿ ಸೈನಿಕರನ್ನು ಕಳಿಸುವುದಾಗಿ ಪ್ರಕಟಿಸಿದ್ದ ಒಬಾಮಾ, ಆಫ್ಘಾನಿಸ್ತಾನ ಮತ್ತು ಪಾಕಿಸ್ತಾನಕ್ಕೆ ಸಂಬಂಧಿಸಿದಂತೆ ಅಮೆರಿಕದ ನೀತಿಯ ವ್ಯಾಪಕ ಪರಾಮರ್ಶೆ ನಡೆಸುತ್ತಿದ್ದಾರೆ. ಈ ವಲಯಕ್ಕೆ ರಿಚರ್ಡ್ ಹಾಲ್‌ಬ್ರೂಕ್ ಅವರನ್ನು ವಿಶೇಷ ಪ್ರತಿನಿಧಿಯಾಗಿ ನೇಮಿಸಿದ್ದಾರೆ.
ಆಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ಉನ್ನತ ಮಟ್ಟದ ನಿಯೋಗವು ಆಯಾ ವಿದೇಶಾಂಗ ಸಚಿವರ ನೇತೃತ್ವದಲ್ಲಿ ವಾಷಿಂಗ್ಟನ್ನಿನಲ್ಲಿ ಭೇಟಿ ಮಾಡಿ ಅಮೆರಿಕದ ನೀತಿಯ ಪರಾಮರ್ಶೆಗೆ ತಮ್ಮ ನಿರ್ಣಾಯಕ ಮಾಹಿತಿಗಳನ್ನು ನೀಡಿದ್ದರು. ಇರಾಕ್‌ನಿಂದ ಪಡೆಗಳನ್ನು ಹಿಂದೆಗೆತವನ್ನು ಒಬಾಮಾ ಪ್ರಕಟಿಸುತ್ತಾ, ಎಲ್ಲವೂ ಒಂದಕ್ಕೊಂದು ಸಂಬಂಧ ಹೊಂದಿದ್ದು, ಯಾವುದನ್ನು ಪ್ರತ್ಯೇಕವಾಗಿ ಕಾಣಲು ಸಾಧ್ಯವಿಲ್ಲ ಎಂದು ನುಡಿದರು.
ಇರಾಕ್‌ನಲ್ಲಿ ನೆಲೆಯಾಗಿರುವ ಎಲ್ಲ ಸೈನಿಕರನ್ನು ಮುಂದಿನ 18 ತಿಂಗಳಲ್ಲಿ ವಾಪಸ್ ಕರೆಸಿಕೊಳ್ಳಲು ಕಾಲಮಿತಿಯನ್ನು ಆಯ್ಕೆಮಾಡಿರುವುದಾಗಿ ಹೇಳಿದ ಒಬಾಮಾ, ಇರಾಕ್‌ನಲ್ಲಿ ಅಮೆರಿಕದ ಕಾರ್ಯಾಚರಣೆ ಮುಂದುವರೆಯುತ್ತದೆಂದು ನುಡಿದರು.
ನಮ್ಮ ಸಮರಬ್ರಿಗೇಡ್‌ಗಳ ಹಿಂತೆಗೆತದ ಬಳಿಕ, ನಮ್ಮ ಕಾರ್ಯಾಚರಣೆಯು ಕಾಳಗದ ಬದಲಿಗೆ ಇರಾಕಿ ಸರ್ಕಾರಕ್ಕೆ ಮತ್ತು ಭದ್ರತಾ ಪಡೆಗಳಿಗೆ ಬೆಂಬಲ ನೀಡುವುಕ್ಕೆ ಬದಲಾಗುವುದು ಎಂದು ಒಬಾಮಾ ಹೇಳಿದರು. |