ಬಾಂಗ್ಲಾದೇಶದಲ್ಲಿ ಎರಡು ದಿನಗಳ ಸೈನಿಕರ ದಂಗೆಯಲ್ಲಿ ಅನೇಕ ಮಂದಿ ಸೇನಾಧಿಕಾರಿಗಳನ್ನು ಹತ್ಯೆ ಮಾಡಿದ ಆರೋಪಿಗಳ ವಿಚಾರಣೆಯನ್ನು ತ್ವರಿತಗತಿಯಲ್ಲಿ ನಡೆಸುವುದಾಗಿ ಹಿರಿಯ ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಿಪಾಯಿ ದಂಗೆ ಬಳಿಕ ಬಿಡಿಆರ್ ಸಂಕೀರ್ಣದಲ್ಲಿ ಸೇನಾಧಿಕಾರಿಗಳ ಸಾಮೂಹಿಕ ಗೋರಿ ಪತ್ತೆಯಾದ ಮರುದಿನವೇ ಅವರ ಹೇಳಿಕೆ ಹೊರಬಿದ್ದಿದೆ. ಬಾಂಗ್ಲಾ ಪ್ರಧಾನಮಂತ್ರಿ ಶೇಖ್ ಹಸೀನಾ ಪ್ರಕಟಿಸಿದ ಕ್ಷಮಾದಾನವೆಂದರೆ ಹತ್ಯಾಕಾಂಡ ಮತ್ತು ದಂಗೆಯಲ್ಲಿ ಭಾಗಿಯಾದ ಸೈನಿಕರಿಗೆ ಕ್ಷಮೆ ನೀಡುವುದೆಂದು ಅರ್ಥವಲ್ಲ ಎಂದು ಅವರು ನುಡಿದರು.
ವಾಸ್ತವವಾಗಿ ತ್ವರಿತಗತಿಯ ವಿಚಾರಣೆಗಾಗಿ ಬಾಂಗ್ಲಾದೇಶ ಸರ್ಕಾರ ವಿಶೇಷ ನ್ಯಾಯಮಂಡಳಿಯನ್ನು ರಚಿಸುತ್ತದೆ ಮತ್ತು ತನಿಖಾ ಸಮಿತಿಯಲ್ಲಿ ಸೇನೆಗೆ ಸೂಕ್ತ ಪ್ರಾತಿನಿಧ್ಯ ನೀಡಲಾಗುವುದು ಎಂದು ಹೇಳಿದರು. ಏತನ್ಮಧ್ಯೆ, ಎರಡು ದಿನಗಳ ಭೀಕರ ದಂಗೆಯಲ್ಲಿ ಮೃತಪಟ್ಟವರಿಗೆ ಪೂರ್ಣ ಸರ್ಕಾರಿ ಗೌರವದಿಂದ ಸಮಾಧಿ ಮಾಡಲಾಗುವುದು ಎಂದು ನುಡಿದರು.
|