ತಾಲಿಬಾನ್ ಈಗಾಗಲೇ ಪಾಕಿಸ್ತಾನದ ವಾಣಿಜ್ಯ ನಗರಿ ಕರಾಚಿಯ ದಕ್ಷಿಣ ಭಾಗದಲ್ಲಿ ಗೌಪ್ಯ ಅಡಗುದಾಣಗಳನ್ನು ಸ್ಥಾಪಿಸಿಕೊಂಡಿದ್ದು, ಯಾವುದೇ ಕ್ಷಣದಲ್ಲಿ ತಾಲಿಬಾನ್ ಉಗ್ರರು ನಗರವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಬಹುದಾಗಿದೆ ಎಂದು ಪಾಕ್ ಪೊಲೀಸ್ ಅಧಿಕಾರಿಯೊಬ್ಬರು ಎಚ್ಚರಿಸಿದ್ದಾರೆ.
ಸಿಂಧ್ ಸರಕಾರ ಮತ್ತು ಪ್ರಾಂತೀಯ ಪೊಲೀಸ್ ಮುಖ್ಯಸ್ಥರಿಗೆ ಸಿಐಡಿ ವಿಶೇಷ ಪೊಲೀಸ್ ದಳವು ಸಲ್ಲಿಸಿದ ವರದಿಯಲ್ಲಿ, ಕರಾಚಿಯಲ್ಲಿ ತಾಲಿಬಾನ್ ಇರುವಿಕೆ ಕುರಿತ ಮಾಹಿತಿಯ ಮೇಲೆ ಬೆಳಕು ಚೆಲ್ಲಲಾಗಿದೆ.
ತಾಲಿಬಾನ್ ಬಳಿ ಭಾರೀ ಪ್ರಮಾಣದಜ ಶಸ್ತ್ರಾಸ್ತ್ರ ಸಂಗ್ರಹವಿದೆ. ಯಾವುದೇ ಕ್ಷಣ ಅದು ಕರಾಚಿಯನ್ನು ಕಬಳಿಸಬಹುದಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದ್ದು, ಖಾಯಿದಾಬಾದ್ ಮತ್ತು ಸೋರಾಬ್ ಗೋಥ್ ಮುಂತಾದ ಪ್ರದೇಶಗಳಲ್ಲಿ ತಾಲಿಬಾನ್ ರಹಸ್ಯ ಅಡಗುದಾಣಗಳು ಮತ್ತು ಇರುವಿಕೆಯ ಕುರಿತು ಮಾಹಿತಿ ನೀಡಲಾಗಿದೆ.
ಈ ಪ್ರದೇಶಗಳ ಪುಟ್ಟ ರಸ್ತೆಬದಿಯ ಹೋಟೆಲುಗಳಲ್ಲಿ ಮಾತ್ರವಲ್ಲದೆ, ಮಂಗೋಪೀರ್ ಮತ್ತು ಆರಂಗೀ ಪಟ್ಟಣ ಹಾಗೂ ಇತರ ಕಡಿಮೆ ಆದಾಯವಿರುವ ಪ್ರದೇಶಗಳು ಹಾಗೂ ಕೊಳೆಗೇರಿಗಳಲ್ಲಿ ತಾಲಿಬಾನ್‌ಗಳು ಠಿಕಾಣಿ ಹೂಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ಹೇಳಿಕೆಯನ್ನು ಉಲ್ಲೇಖಿಸಿ ಡೈಲಿ ಟೈಮ್ಸ್ ವರದಿ ಮಾಡಿದೆ.
ನಿಷೇಧಿತ ತೆಹ್ರಿಕ್ ಇ ತಾಲಿಬಾನ್ ಪಡೆಯ ಮುಖ್ಯಸ್ಥ ಹಸನ್ ಮಹಮೂದ್ ಕೂಡ ಕರಾಚಿಯಲ್ಲೇ ಅಡಗಿಕೊಂಡಿದ್ದಾನೆ ಎಂದು ತಿಳಿಸಿರುವ ಈ ವರದಿಯು ಪೊಲೀಸ್ ಮತ್ತು ಭದ್ರತಾ ಪಡೆಗಳಲ್ಲಿ ಚಳಿ ಮೂಡಿಸಿದೆ ಎಂದು ಡೈಲಿ ಟೈಮ್ಸ್ ಬಣ್ಣಿಸಿದೆ.
ಇತ್ತೀಚೆದೆ ಸೋರಾಬ್ ಗೋತ್‌ನ ಗೆಸ್ಟ್ ಹೌಸ್ ಒಂದರ ಮೇಲೆ ಕ್ರೂರ ಅಪರಾಧ ನಿರೋಧಕ ಸೆಲ್‌ನ ಪೊಲೀಸರು ದಾಳಿ ಮಾಡಿದ್ದರು. ಆದರೆ ತಾಲಿಬಾನ್‌ಗಳು ಈ ಪೊಲೀಸರನ್ನೇ ತಮ್ಮ ವಶಕ್ಕೆ ತೆಗೆದುಕೊಂಡು, ಅವರನ್ನು ಕೊಲ್ಲಲು ಸಿದ್ಧವಾಗುತ್ತಿರುವಾಗ ಮತ್ತೊಂದು ಪೊಲೀಸ್ ಪಡೆ ಬಂದು ರಕ್ಷಿಸಿತ್ತು. ಕಾರ್ಯಾಚರಣೆಯಲ್ಲಿ ಇಬ್ಬರು ಪೊಲೀಸರು ಸಾವನ್ನಪ್ಪಿ 13 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ತಾಲಿಬಾನ್ ಪಡೆಗೆ ಸೇರಿದವರೆನ್ನಲಾದ 8 ಮಂದಿಯನ್ನೂ ಪೊಲೀಸರು ಬಂಧಿಸಿದ್ದರು. |