ವಾಣಿಜ್ಯ ದಾಳಿಯ ವೇಳೆ ಸೆರೆಸಿಕ್ಕಿರುವ ಏಕೈಕ ಉಗ್ರ ಅಜ್ಮಲ್ ಅಮೀರ್ ಕಸಬ್ ಸಮುದ್ರ ಮಾರ್ಗ ಮೂಲಕ ಭಾರತಕ್ಕೆ ತೆರಳಿಲ್ಲ ಎಂಬುದಾಗಿ ಪಾಕಿಸ್ತಾನ ನೌಕಾ ಪಡೆ ಮುಖ್ಯಸ್ಥ ಅಡ್ಮಿರಲ್ ನೋಮನ್ ಬಶೀರ್ ನೀಡಿರುವ ಹೇಳಿಕೆ ತೀವ್ರ ವಿವಾದಕ್ಕೆ ಎಡೆಮಾಡಿಕೊಡುತ್ತಿರವಂತೆಯೇ ಶನಿವಾರ ಸ್ಪಷ್ಟನೆ ನೀಡುವ ಮೂಲಕ ಮತ್ತೆ ತನ್ನ ಇಬ್ಬಗೆಯ ಹೇಳಿಕೆಗೆ ಸಮಜಾಯಿಷಿ ನೀಡಿದ್ದಾರೆ.
ಪಾಕಿಸ್ತಾನದ ನೌಕಾ ಪಡೆಯ ಅಡ್ಮಿರಲ್ ನೋಮನ್ ಬಶೀರ್ ನೀಡಿರುವ ಹೇಳಿಕೆಗೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು, ಆದರೆ ಘಟನೆ ಕುರಿತಂತೆ ನೌಕಾಪಡೆಯ ಹತ್ತಿರ ಯಾವುದೇ ಪುರಾವೆ ಇಲ್ಲ. ಅದು ಆಂತರಿಕ ಸಚಿವಾಲಯದ ಬಳಿ ಪುರಾವೆ ಇದ್ದಿರುವುದರಿಂದ ಈ ಗೊಂದಲ ಏರ್ಪಟ್ಟಿದೆ ಎಂದು ಸ್ಪಷ್ಟನೆ ನೀಡಿದ್ದು, ಇದು ತನ್ನ ವೈಯಕ್ತಿಕ ಅಭಿಪ್ರಾಯ ಎಂದು ಬಶೀರ್ ಉಲ್ಟಾ ಹೊಡೆದಿದ್ದಾರೆ.
ಮುಂಬೈ ದಾಳಿ ಕುರಿತಂತೆ ಇನ್ನು ಮುಂದೆ ಹೇಳಿಕೆ ನೀಡುವ ಮುನ್ನ ಆಂತರಿಕ ಸಚಿವಾಲಯದ ವರದಿಯಂತೆ ವಿವರಣೆ ನೀಡುವುದಾಗಿ ನೌಕಾಪಡೆ ಮುಖ್ಯಸ್ಥರು ಈ ಸಂದರ್ಭದಲ್ಲಿ ತಿಳಿಸಿದರು.
ಮುಂಬೈ ಮೇಲೆ ಭಯೋತ್ಪಾದನಾ ದಾಳಿ ನಡೆಸಿದ ಉಗ್ರರು ಕರಾಚಿಯಂದ ಬೋಟ್ ಮೂಲಕ ಭಾರತ ಪ್ರವೇಶಿಸಿರುವುದಾಗಿ ಪಾಕ್ ಆಂತರಿಕ ಸಚಿವಾಲಯ ಈ ಮೊದಲು ಹೇಳಿಕೆಯಲ್ಲಿ ತಿಳಿಸಿತ್ತು. ಆದರೆ ಶುಕ್ರವಾರ ಪಾಕ್ ನೌಕಪಡೆಯ ಬಶೀರ್ ದ್ವಂದ್ವ ಹೇಳಿಕೆ ನೀಡುವ ಮೂಲಕ ವಿವಾದಕ್ಕೆ ಎಡೆಮಾಡಿಕೊಟ್ಟಿದ್ದರು. |