ಬಾಂಗ್ಲಾದೇಶ ರೈಫಲ್ಸ್ ಪಡೆಯ ಸೈನಿಕರು ದಂಗೆ ನಡೆಸಿದ ಸ್ಥಳದಲ್ಲಿ ಎರಡನೇ ಸಾಮೂಹಿಕ ಗೋರಿ ಪತ್ತೆಯಾಗಿದ್ದು, ಸೈನಿಕರ ದಂಗೆಯ ಭೀಕರತೆಗೆ ಸಾಕ್ಷಿಯಾಗಿದೆ. ದಂಗೆಯಲ್ಲಿ ಸುಮಾರು 100 ಜನರು ಸತ್ತಿದ್ದಾರೆಂದು ಶಂಕಿಸಲಾಗಿದ್ದು, ಇನ್ನುಳಿದ ಹತ್ತಾರು ಮಂದಿ ನಾಪತ್ತೆಯಾದ ಅಧಿಕಾರಿಗಳಿಗಾಗಿ ಸೇನೆ ಶೋಧ ಮುಂದುವರಿಸುತ್ತಿದ್ದಾಗ ಬಾರ್ಡರ್ ಗಾರ್ಡ್ಸ್ ಕಾಂಪೌಂಡ್‌ನಲ್ಲಿ ಎರಡನೇ ಗೋರಿಯನ್ನು ಪತ್ತೆಹಚ್ಚಿದೆ.
ಶುಕ್ರವಾರ ಪತ್ತೆಯಾದ ಮೊದಲ ಗೋರಿಯಲ್ಲಿ ಸೈನಿಕರು ಹತ್ಯೆಮಾಡಿದ 58 ಸೇನಾಧಿಕಾರಿಗಳ ಶವಗಳು ಇದ್ದಿರಬಹುದೆಂದು ಶಂಕಿಸಲಾಗಿದೆ.
'ನಾವು ಇನ್ನೊಂದು ಸಾಮೂಹಿಕ ಗೋರಿ ಪತ್ತೆಹಚ್ಚಿದ್ದೇವೆ. ಅದು ತೋಟವೊಂದರಲ್ಲಿ ಮೂಲೆಯಲ್ಲಿ ಪತ್ತೆಯಾಗಿದ್ದು, ಕಣ್ಣಿನಿಂದ ಮರೆಯಾಗುವಂತೆ ಬಚ್ಚಿಡಲಾಗಿದೆ' ಎಂದು ಅಗ್ನಿಶಾಮಕ ಸಿಬ್ಬಂದಿ ಮುಖ್ಯಸ್ಥ ತಿಳಿಸಿದ್ದಾರೆ. ಗೋರಿಯನ್ನು ಅಗೆದಾಗ ಎರಡು ಶವಗಳು ಸಿಕ್ಕಿದ್ದು ಇನ್ನಷ್ಟು ಸಿಗುವುದು ಖಚಿತವೆಂದು ಅವರು ಹೇಳಿದ್ದಾರೆ.
ಏತನ್ಮಧ್ಯೆ ಸೇನೆಯ ಎರಡನೇ ದಂಡಾಧಿಪತಿ ಲೆ.ಜನರಲ್ ಎಂಎ ಮುಬಿನ್, ಹಂತಕರಿಗೆ ಶಿಕ್ಷೆ ವಿಧಿಸಲಾಗುವುದು ಎಂದು ತಿಳಿಸಿದರು. ಇಂತಹ ಹೇಯ ಮತ್ತು ಅಮಾನುಷ ಕೃತ್ಯದಲ್ಲಿ ಪಾಲ್ಗೊಂಡ ಬಿಡಿಆರ್ ಪಡೆಗಳನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ ಎಂದು ಟೆಲಿವಿಷನ್ ಭಾಷಣದಲ್ಲಿ ಅವರು ತಿಳಿಸಿದ್ದಾರೆ.
ಸರ್ಕಾರ ದಂಗೆಯನ್ನು ನಿಭಾಯಿಸಿದ ವಿಧಾನದ ಬಗ್ಗೆ ಮಿಲಿಟರಿಯಲ್ಲಿ ಅತೃಪ್ತಿ ಮೂಡಿದೆ ಎಂಬ ವರದಿಗಳ ನಡುವೆ, ಬಾಂಗ್ಲಾದೇಶದ ಸಶಸ್ತ್ರ ಪಡೆ ಸರ್ಕಾರಕ್ಕೆ ಬೆಂಬಲವಾಗಿ ನಿಂತಿದೆ. ಕನಿಷ್ಠ 200 ಶಂಕಿತ ದಂಗೆಕೋರರನ್ನು ಬಂಧಿಸಲಾಗಿದೆ. ಬ್ಯಾರಕ್‌ಗಳಿಂದ ಸಾಮಾನ್ಯ ಉಡುಪಿನಲ್ಲಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಅವರನ್ನು ಬಂಧಿಸಲಾಯಿತು. ದಂಗೆಯಲ್ಲಿ ಮೃತಪಟ್ಟ ಸೇನಾಧಿಕಾರಿಗಳ ಸ್ಮರಣಾರ್ಥ ಮೂರು ದಿನಗಳ ಶೋಕಾಚರಣೆ ಶುಕ್ರವಾರದಿಂದ ಆರಂಭವಾಗಿದ್ದು, ಭಾನುವಾರ ಮಧ್ಯರಾತ್ರಿ ಕೊನೆಗೊಳ್ಳಲಿದೆ. |