ಬಾಂಗ್ಲಾದೇಶ ರೈಫಲ್ಸ್ ಪಡೆಯ ಬಂಡಾಯದಿಂದ ಹರಿದ ರಕ್ತದೋಕುಳಿಗೆ ತೀವ್ರ ಕಳವಳಪಟ್ಟಿರುವ ವಿಶ್ವಸಂಸ್ಥೆ ಮುಖ್ಯಸ್ಥ ಬಾನ್ ಕಿ ಮೂನ್, ಇನ್ನಷ್ಟು ಹಿಂಸಾಚಾರಕ್ಕೆ ಎಡೆಯಾಗದಂತೆ ಶಾಂತಿ ಮತ್ತು ಪರಿಹಾರಕ್ಕೆ ಅವರು ಕರೆ ನೀಡಿದ್ದಾರೆ.
ಹೇಳಿಕೆಯೊಂದರಲ್ಲಿ ನಿರ್ದಯ ಹಿಂಸಾಕೃತ್ಯಗಳನ್ನು ಖಂಡಿಸಿದ ಬಾನ್, ಮೃತಪಟ್ಟ ದುರ್ದೈವಿಗಳಿಗೆ ಮತ್ತು ಅವರ ಕುಟುಂಬಗಳಿಗೆ ತಮ್ಮ ತೀವ್ರ ಸಂತಾಪವನ್ನು ಸೂಚಿಸಿದ್ದಾರೆ. ಅಮೆರಿಕ ಮತ್ತು ಬ್ರಿಟನ್ ಕೂಡ ಸೈನಿಕರ ದಂಗೆಯನ್ನು ಖಂಡಿಸಿದ್ದು, ಪ್ರಧಾನಿ ಶೇಖ್ ಹಸೀನಾ ಸರ್ಕಾರಕ್ಕೆ ತಮ್ಮ ಬೆಂಬಲ ವಿಸ್ತರಿಸಿದ್ದಾರೆ.
ಹಿಂಸಾಚಾರದಲ್ಲಿ ಗಾಯಗೊಂಡವರಿಗೆ ಸಹಾನೂಭೂತಿ ಮತ್ತು ದಂಗೆಯಲ್ಲಿ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ಅವು ಸಂತಾಪ ಸೂಚಿಸಿವೆ. ವೇತನ ಹೆಚ್ಚಳಕ್ಕಾಗಿ ಒತ್ತಾಯಿಸಿ ಭುಗಿಲೆದ್ದ ಸೈನಿಕರ ಬಂಡಾಯದಿಂದ ಮೃತರ ಸಂಖ್ಯೆ 67ಕ್ಕೆ ಮುಟ್ಟಿದ್ದು, ಸತ್ತವರಲ್ಲಿ ಬಿಡಿಆರ್ ಮುಖ್ಯಸ್ಥ ಮೇ.ಜನರಲ್ ಶಕೀಲ್ ಅಹ್ಮದ್ ಕೂಡ ಸೇರಿದ್ದಾರೆ. |