ಬಾಂಗ್ಲಾದಲ್ಲಿ ಕಳೆದ 33ಗಂಟೆಗಳ ಕಾಲ ನಡೆದ ಸಿಪಾಯಿ ದಂಗೆಯಲ್ಲಿ 73ಮಂದಿ ಆರ್ಮಿ ಅಧಿಕಾರಿಗಳು ಹತರಾಗಿದ್ದು, ಇದೀಗ ದಂಗೆ ಎದ್ದ ಬಾಂಗ್ಲಾದೇಶಿ ಅರೆಸೇನಾ ಪಡೆ ಬಿಡಿಆರ್‌ನ ಸುಮಾರು ಒಂದು ಸಾವಿರ ಸೈನಿಕರ ವಿರುದ್ಧ ಭಾನುವಾರ ಕೊಲೆ ಮೊಕದ್ದಮೆ ದಾಖಲಿಸಲಾಗಿದೆ.
ಬಾಂಗ್ಲಾದಲ್ಲಿ ದಿಢೀರನೆ ಎದ್ದ ಸಿಪಾಯಿ ದಂಗೆಯ ಹಿಂದೆ ಹೊರಗಿನವರ ಕೈವಾಡ ಇದೆ ಎಂದು ಬಾಂಗ್ಲಾ ಸರಕಾರ ಶಂಕೆ ವ್ಯಕ್ತಪಡಿಸಿದೆ. ಆರೋಪಿತರ ವಿರುದ್ಧ ಕಠಿಣ ಕ್ರಮಕ್ಕೆ ಈಗಾಗಲೇ ಬಾಂಗ್ಲಾ ಸೇನೆ ಆಗ್ರಹಿಸಿರುವ ಹಿನ್ನೆಲೆಯಲ್ಲಿ ಭಾನುವಾರ ಕ್ರಿಮಿನಲ್ ಮೊಕದ್ದಮೆ ದಾಖಲಿಸಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಸಿಪಾಯಿ ದಂಗೆಯ ಹಿಂದೆ ಬಿಡಿಆರ್ ಜತೆ ಹೊರಗಿನವರು ಶಾಮೀಲಾಗಿರುವ ಸಾಧ್ಯತೆ ಇರುವುದಾಗಿ ಮಾಧ್ಯಮಗಳ ವರದಿ ಹೇಳಿದೆ. ಘಟನೆ ಕುರಿತಂತೆ ಎಲ್ಲರೂ ಸಹಕಾರ ನೀಡಬೇಕೆಂದು ನೂತನವಾಗಿ ಆಯ್ಕೆಗೊಂಡ ಶೇಖ್ ಹಸೀನಾ ನೇತೃತ್ವದ ಸರಕಾರ ಮನವಿ ಮಾಡಿಕೊಂಡಿದೆ.
ಸಿಪಾಯಿ ದಂಗೆ ಕುರಿತಂತೆ ಈಗಾಗಲೇ ಕೆಲವು ಪುರಾವೆಗಳು ಸರಕಾರಕ್ಕೆ ತಲುಪಿರುವುದಾಗಿ ಸಚಿವಾಲಯ ವಿವರಿಸಿದ್ದು, ಇದೊಂದು ವ್ಯವಸ್ಥಿತ ಸಂಚು ಎಂದು ದೂರಿದೆ. |