ಎಲ್ಲಾ ಪ್ರಮುಖ ಭಯೋತ್ಪಾದನಾ ಜಾಲಗಳ ಕಾರ್ಯಾಚರಣೆಗೆ ಪಾಕಿಸ್ತಾನವು ಸುರಕ್ಷಿತ ಸ್ವರ್ಗವಾಗಿರುವುದು ಅಮೆರಿಕದ ಭಯೋತ್ಪಾದನಾ ವಿರುದ್ಧದ ಯುದ್ಧಕ್ಕೆ ಸಮಸ್ಯೆ ಸೃಷ್ಟಿಸುತ್ತಿದೆ ಎಂದು ರಕ್ಷಣಾ ಕಾರ್ಯದರ್ಶಿ ರಾಬರ್ಟ್ ಗೇಟ್ಸ್ ಹೇಳಿದ್ದಾರೆ.
ಪಾಕಿಸ್ತಾನಿ ಗಡಿಯು ಅಲ್-ಖೈದಾಗೆ ಮಾತ್ರವೇ ಸುರಕ್ಷಿತ ಸ್ವರ್ಗವಲ್ಲ. ತಾಲಿಬಾನ್, ಹಕಾನಿ ಜಾಲ, ಗುಲ್‌ಬದ್ದಿನ್ ಹೆಕ್ಮತ್ಯಾರ್ ಮತ್ತು ಇತರ ಅಂಗಸಂಸ್ಥೆಗಳು ಜತೆಯಾಗಿ ಕಾರ್ಯನಿರ್ವಹಿಸುತ್ತಿರುವಂತೆ ತೋರುತ್ತದೆ ಎಂದಿರುವ ಗೇಟ್ಸ್, ಅಲ್ಲಿ ಕಾರ್ಯಾಚರಿಸಲು ಎಲ್ಲಿಯವರೆಗೆ ಅದು ಸುರಕ್ಷಿತ ಸ್ವರ್ಗವಾಗಿದೆಯೋ ಅಲ್ಲಿಯ ತನಕ ಅದು ನಮಗೆ ಸಮಸ್ಯೆಯಾಗಿರುತ್ತದೆ ಎಂದು ಎಂಎಸ್ಎನ್‌ಬಿಸಿ ಸುದ್ದಿವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.
ಈ ಕುರಿತು ಕಳವಳ ವ್ಯಕ್ತಪಡಿಸಿದ ಅವರು ಈ ಸಮಸ್ಯೆಯನ್ನು ನಿವಾರಿಸಲು ಅದು ತನ್ನ ಒತ್ತಡವನ್ನು ಮುಂದುವರಿಸುತ್ತಿದೆ ಎಂದು ತಿಳಿಸಿದರು.
ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಶ್ಫಕ್ ಪರ್ವೇಜ್ ಕಯಾನಿ ಅವರನ್ನು ಕಳೆದ ವಾರ ವಾಶಿಂಗ್ಟನ್‌ನಲ್ಲಿ ಭೇಟಿಯಾಗಿರುವ ಗೇಟ್ಸ್, ತಮ್ಮ ನೆಲದಲ್ಲಿ ನಡೆಯುತ್ತಿರುವ ಚಟುವಟಿಕೆಯು ರಾಷ್ಟ್ರಕ್ಕೆ ಅಪಾಯಕಾರಿ ಎಂಬುದನ್ನು ಪಾಕಿಸ್ತಾನ ನಾಯಕತ್ವ ಈಗ ಅರಿತುಕೊಂಡಿದೆ ಎಂದೂ ನುಡಿದರು.
ಪಾಕಿಸ್ತಾನದ ಎಫ್ಎಟಿಎ ಪ್ರಾಂತ್ಯವು ಉಗ್ರರ ಸ್ವರ್ಗತಾಣವಾಗಿರುವುದು ನಿರಂತರ ಕಳವಳದ ವಿಚಾರವಾಗಿದೆ. ಈ ಸಮಸ್ಯೆಯನ್ನು ಎದುರಿಸಲಾಗಿದೆ, ಎದುರಿಸಲಾಗುತ್ತಿದೆ ಮತ್ತು ಇದರ ಮುಂದುವರಿಕೆಯ ಅವಶ್ಯಕತೆ ಇದೆ ಎಂಬುದಾಗಿ ಅಮೆರಿಕದ ಸೇನಾ ಮುಖ್ಯಸ್ಥ ಅಡ್ಮಿರಲ್ ಮ್ಯಾಕ್ ಮುಲನ್ ಸಂದರ್ಶನ ಒಂದರಲ್ಲಿ ಹೇಳಿದ್ದಾರೆ.
ನಾವು ಪಾಕಿಸ್ತಾನದ ಗಡಿಗಳಲ್ಲಿ, ಪಾಕಿಸ್ತಾನದ ಸೇನೆಯ ಮೇಲೆ ಹಾಗೂ ಆಫ್ಗಾನ್ ಪಡೆಗಳು ಮತ್ತು ಸಂಯುಕ್ತ ಪಡೆಗಳ ಮೇಲೆ ಒತ್ತಡ ಹೇರುತ್ತಿರುವುದಾಗಿಯೂ ಅವರು ನುಡಿದರು. |