ಬಾಂಗ್ಲಾದೇಶ ರೈಫಲ್ಸ್ ಸಿಬ್ಬಂದಿಯ 6 ಮಂದಿ ಸಿಬ್ಬಂದಿ ಅರೆಮಿಲಿಟರಿ ಪಡೆಯಲ್ಲಿ ಸೇವೆಸಲ್ಲಿಸುತ್ತಿರುವ ಸೇನಾಧಿಕಾರಿಗಳ ಇಡೀ ತಂಡವನ್ನು ಬಹುತೇಕ ನೆಲಸಮ ಮಾಡಿದ ಸೈನಿಕರ ದಂಗೆಯ ಸೂತ್ರಧಾರರೆಂದು ಪೊಲೀಸರು ಗುರುತಿಸಿದ್ದಾರೆ. ಬಿಡಿಆರ್‌ನ 1000 ಸೈನಿಕರ ವಿರುದ್ಧ ಪೊಲೀಸರು ಹತ್ಯೆ ಆರೋಪಗಳನ್ನು ಮಾಡಿದ್ದು, ಬಂಡಾಯದ ನೇತೃತ್ವವನ್ನು ಅವರಲ್ಲಿ 6 ಮಂದಿ ವಹಿಸಿದ್ದರೆಂದು ಶಂಕಿಸಿದ್ದಾರೆ.
'ಅಧಿಕಾರಿಗಳನ್ನು ಮತ್ತು ಅವರ ಕುಟುಂಬದವರನ್ನು ಯೋಜಿತ ರೀತಿಯಲ್ಲಿ ಕೊಂದ ಆರೋಪವನ್ನು ಅವರ ಮೇಲೆ ಹೊರಿಸಿದ್ದೇವೆ' ಎಂದು ಢಾಕಾ ಲಾಲ್‌ಬಾಗ್ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.
'ಬಿಡಿಆರ್‌ನ ನಾಲ್ವರು ಉಪಸಹಾಯಕ ನಿರ್ದೇಶಕರು ಮತ್ತು ಇಬ್ಬರು ಕೆಳದರ್ಜೆಯ ಸೈನಿಕರು ಬಂಡಾಯದ ಸಾರಥ್ಯ ವಹಿಸಿ ಒತ್ತೆಯಾಳುಗಳನ್ನು ಹಿಡಿದಿಟ್ಟರು ಮತ್ತು ಅಗ್ನಿಸ್ಪರ್ಶ ಮಾಡಿದರು ಹಾಗೂ ಸೇನಾಧಿಕಾರಿಗಳ ಮತ್ತು ಕುಟುಂಬದವರ ದೇಹಗಳನ್ನು ಅಡಗಿಸಿಟ್ಟರೆಂದು' ಅವರು ಆರೋಪಿಸಿದ್ದಾರೆ.
ಡಿಎಡಿಯ ತೌಹಿದಲ್ ಅಲಾಂ, ಜಲೀಲ್, ನಾಸಿರುದ್ದೀನ್ ಖಾನ್, ಮಿರ್ಜಾ ಮಹಾಬುಬುರ್ ರೆಹಮಾನ್ ಮತ್ತು ಯೋಧರಾದ ಅಬ್ದುರ್ ರಹೀಂ ಮತ್ತು ಸಲಿಂ 6 ಮಂದಿ ಸೂತ್ರಧಾರರೆಂದು ಎಂದು ಬಾಂಗ್ಲಾದೇಶ ಮಾಧ್ಯಮದ ಪೋರ್ಟಲ್ ತಿಳಿಸಿದೆ. ಬಾಂಗ್ಲಾದ ಅಮಾನುಷ ದಂಗೆಯಲ್ಲಿ ಇದುವರೆಗೆ 73 ಸೇನಾಧಿಕಾರಿಗಳ ಶವಗಳನ್ನು ಸಮಾಧಿಗಳಿಂದ ಹೊರತೆಗೆಯಲಾಗಿದ್ದು, ಇನ್ನೂ 70 ಮಂದಿ ಸೇನಾಧಿಕಾರಿಗಳಿಗೆ ಶೋಧ ನಡೆಸಲಾಗುತ್ತಿದೆ. |