9/11ರ ಭಯೋತ್ಪಾದನೆ ದಾಳಿ ಬಳಿಕ ಒಸಾಮಾ ಬಿನ್ ಲಾಡೆನ್ ಹಿಡಿಯಲು ಅಮೆರಿಕ ವ್ಯಾಪಕ ಬೇಟೆ ಆರಂಭಿಸಿದ್ದು, ಅವನನ್ನು ಪತ್ತೆ ಹಚ್ಚುವುದು ಅಸಾಧಾರಣವಾಗಿ ಕಷ್ಟವೆಂದು ಅಮೆರಿಕ ಸೇನಾಪಡೆಯ ಮುಖ್ಯಸ್ಥ ಭಾನುವಾರ ತಿಳಿಸಿದ್ದಾರೆ.
'ನಾವು ಅವನನ್ನು ಪತ್ತೆ ಹಚ್ಚಲು ಗಣನೀಯ ಪ್ರಮಾಣದ ಪ್ರಯತ್ನ ಮಾಡುತ್ತಿಲ್ಲವೆಂದು ಅದರ ಅರ್ಥವಲ್ಲ. ನಾವು ಪ್ರಯತ್ನ ಮುಂದುವರಿಸುವುದು ಖಚಿತ. ಆದರೆ ಅವನು ನಮ್ಮ ಕಣ್ಣಿಗೆ ಬೀಳದಂತೆ ತಪ್ಪಿಸಿಕೊಂಡಿದ್ದಾನೆಂದು' ಅಡ್ಮೈರಲ್ ಮೈಕ್ ಮುಲನ್ ಹೇಳಿದರು.
ಕಳೆದ ವರ್ಷ ಅವರು ಅಧಿಕಾರ ವಹಿಸಿಕೊಂಡ ಬಳಿಕ ಪಾಕಿಸ್ತಾನ ಸೇನಾಮುಖ್ಯಸ್ಥ ಕಯಾನಿಯನ್ನು ಸುಮಾರು 10 ಬಾರಿ ಸಂಧಿಸಿದ್ದರು. ಕಯಾನಿಗೆ ಮತ್ತು ಅವರ ನಾಯಕತ್ವಕ್ಕೆ ಅಲ್ ಖೈದಾ ಗಂಭೀರ ಬೆದರಿಕೆಯೆನ್ನುವುದು ನಿರ್ದಿಷ್ಟವಾಗಿ ತಿಳಿದಿದೆ.
'ಅಲ್ ಖಾಯಿದಾ ನಾಯಕತ್ವ ನಮಗೆ ಬೆದರಿಕೆಯಲ್ಲದೇ ಅವರಿಗೆ ಕೂಡ ಬೆದರಿಕೆಯಾಗಿದೆ. ಅವರ ರಾಷ್ಟ್ರದಲ್ಲೇ ಹಿಂಸಾಚಾರ ನಾಟಕೀಯವಾಗಿ ಮೇರೆಮೀರಿದ್ದನ್ನು ಕಂಡಿದ್ದಾರೆಂದು' ಮುಲನ್ ತಿಳಿಸಿದರು. |