ಅಮೆರಿಕದ ಚಾಲಕರಹಿತ ವಿಮಾನದಿಂದ ಹಾರಿಸಿದ ಕ್ಷಿಪಣಿಗಳು ಆಫ್ಘನ್-ಪಾಕಿಸ್ತಾನದ ಗಡಿಯ ಸಮೀಪ ವಾಸ್ತವ್ಯವಿದ್ದ 7 ಜನರನ್ನು ಹತ್ಯೆಮಾಡಿದೆಯೆಂದು ಪಾಕಿಸ್ತಾನಿ ಮೂಲಗಳು ಹೇಳಿವೆ. ದಕ್ಷಿಣ ವಾಜಿರಿಸ್ತಾನದ ಸರಾರೋಘದಲ್ಲಿ ಎರಡು ಕ್ಷಿಪಣಿಗಳು ಮನೆಯೊಂದಕ್ಕೆ ಅಪ್ಪಳಿಸಿದವು. ಸತ್ತವರಲ್ಲಿ ಶಂಕಿತ ಉಗ್ರಗಾಮಿಗಳು ಸೇರಿದ್ದಾರೆಂದು ನಂಬಲಾಗಿದೆ.
ಈ ಪ್ರದೇಶವು ಪಾಕಿಸ್ತಾನದ ತಾಲಿಬಾನ್ ನಾಯಕ ಬೈತುಲ್ಲಾ ಮೆಹಸೂದ್‌ನ ಭದ್ರನೆಲೆಯೆಂದು ಹೇಳಲಾಗಿದೆ. ತಾಲಿಬಾನ್ ಉಗ್ರವಾದಿಗಳು ಈ ಮನೆಯಿಂದ ಕಾರ್ಯಾಚರಿಸುತ್ತಿದ್ದು, ಅದರ ಮೇಲೆ ದಾಳಿ ಮಾಡಲಾಗಿದೆಯೆಂದು ಸ್ಥಳೀಯ ಜನರು ತಿಳಿಸಿದ್ದಾರೆ. ದಾಳಿಯನ್ನು ಕುರಿತು ಕೇಳಿದಾಗ ಅಮೆರಿಕದ ಕಾರ್ಯಾಚರಣೆಯ ಬಗ್ಗೆ ವಿವರ ನೀಡುವುದಿಲ್ಲವೆಂದು ಜಂಟಿ ಸಿಬ್ಬಂದಿ ಮುಖ್ಯಸ್ಥರ ಅಧ್ಯಕ್ಷ ಮುಲ್ಲೆನ್ ಹೇಳಿದರು.
ಮಿಲಿಟರಿಯು ಅಮೆರಿಕದ ಅಧ್ಯಕ್ಷ ಒಬಾಮಾ ನಿರ್ದೇಶನವನ್ನು ಪಾಲಿಸುತ್ತಿದೆಯೆಂದು ಅವರು ನುಡಿದರು.ದಾಳಿಗೆ ಮುನ್ನ ಆಕಾಶದಲ್ಲಿ ಡ್ರೋನ್‌ಗಳು ಕಾಣಿಸಿದವು ಮತ್ತು ದಾಳಿ ನಡೆದ ಬಳಿಕ ತಾಲಿಬಾನಿಗಳು ಉಗ್ರಗಾಮಿಗಳ ತರಬೇತಿ ಸೌಲಭ್ಯವೆಂದು ಹೇಳಲಾದ ಹಾನಿಗೊಂಡ ಮನೆಯನ್ನು ಸುತ್ತುವರಿದರೆಂದು ಹೆಸರು ಹೇಳಲು ಬಯಸದ ಪಾಕಿಸ್ತಾನ ಅಧಿಕಾರಿಗಳು ತಿಳಿಸಿದ್ದಾರೆ.
ಆಫ್ಘನ್ ಗಡಿವಲಯದ ಬಗ್ಗೆ ಅಮೆರಿಕ ಮತ್ತು ಪಾಕಿಸ್ತಾನದ ನಡುವೆ ಭಿನ್ನಮತ ಉಂಟಾಗಿದ್ದು, ಉಗ್ರಗಾಮಿಗಳನ್ನು ದಮನಿಸುವ ಪಾಕ್ ಪ್ರಯತ್ನಗಳಿಗೆ ಅಮೆರಿಕ ಅತೃಪ್ತಿ ವ್ಯಕ್ತಪಡಿಸಿದ್ದರೆ, ಅಮೆರಿಕದ ಚಾಲಕರಹಿತ ಡ್ರೋನ್ ವಿಮಾನಗಳ ದಾಳಿಯನ್ನು ಪಾಕಿಸ್ತಾನ ಖಂಡಿಸಿದೆ.
'ವೈಮಾನಿಕ ದಾಳಿಯಿಂದ ಸಾರ್ವಜನಿಕ ಆಕ್ರೋಶವನ್ನು ಉದ್ದೀಪನಗೊಳಿಸಿದ್ದು, ಪಾಕಿಸ್ತಾನದ ಭಯೋತ್ಪಾದನೆ ನಿಗ್ರಹ ಪ್ರಯತ್ನಗಳನ್ನು ಜಟಿಲಗೊಳಿಸಿದೆಯೆಂದು ಹೇಳಿರುವ ಪಾಕ್ ಅಧಿಕಾರಿಗಳು, ನೂತನ ಅಮೆರಿಕ ಆಡಳಿತವು ವಿವಾದಾತ್ಮಕ ವಾಯುದಾಳಿಯನ್ನು ನಿಲ್ಲಿಸುತ್ತದೆಂದು ಆಶಿಸಿದ್ದಾರೆ.
|