ಗಿನಿಯ-ಬಿಸಾವು ಅಧ್ಯಕ್ಷ ಜೋಯ್ ಬರ್ನಾರ್ಡೊ ವಿಯೆರಾ ಅವರನ್ನು ಸೈನಿಕರು ಗುಂಡಿಕ್ಕಿ ಕೊಂದಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜಧಾನಿ ಬಿಸಾವುನಲ್ಲಿ ಗುಂಡಿನ ಮೊರೆತ ಕೇಳಿಬರುತ್ತಿದ್ದು, ಪಶ್ಚಿಮ ಆಫ್ರಿಕಾ ರಾಷ್ಟ್ರದ ಹತೋಟಿ ಯಾರ ಕೈಲಿದೆ ಎನ್ನುವುದು ಅಸ್ಪಷ್ಟವಾಗಿದೆ. ಬಿಸಾವು ವಿಶ್ವದಲ್ಲೇ ಬಡರಾಷ್ಟ್ರಗಳಲ್ಲಿ ಒಂದಾಗಿದ್ದು, ಸೈನಿಕ ಕ್ರಾಂತಿಗಳ ಇತಿಹಾಸ ಹೊಂದಿದೆ ಮತ್ತು ಯುರೋಪ್‌ಗೆ ಕೊಕೇನ್ ಕಳ್ಳಸಾಗಣೆಯ ಮುಖ್ಯ ರಹದಾರಿಯಾಗಿದೆ.
ಅಧ್ಯಕ್ಷ ವಿಯೆರಾ ತನ್ನ ಮನೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಂತೆ ಸೈನಿಕರ ಗುಂಪು ದಾಳಿ ಮಾಡಿ ಕೊಂದಿತೆಂದು ಮಿಲಿಟರಿ ವಕ್ತಾರ ಜಾಮೋರಾ ಇಂಟುಡಾ ತಿಳಿಸಿದ್ದಾರೆ. ಸೇನಾ ಮುಖ್ಯಸ್ಥನ ಹತ್ಯೆಗೆ ವಿಯೆರಾ ಜವಾಬ್ದಾರಿ ಎಂಬ ಕಾರಣದ ಮೇಲೆ ಅವರನ್ನು ಹತ್ಯೆಮಾಡಲಾಗಿದೆ.
ಜನರಲ್ ತಾಗ್ಮೆ ಭಾನುವಾರ ಸಂಭವಿಸಿದ ಸ್ಫೋಟದಲ್ಲಿ ಮೃತಪಟ್ಟಿದ್ದು, ಮಿಲಿಟರಿ ಮುಖ್ಯಕೇಂದ್ರದ ಭಾಗ ನಾಶವಾಗಿದೆ. ಸೇನಾ ಮುಖ್ಯಸ್ಥರು ತಮ್ಮ ಕಚೇರಿಯಲ್ಲಿ ಕುಳಿತಿದ್ದಾಗ ಈ ಸ್ಫೋಟ ಉಂಟಾಗಿತ್ತು.ಕನಿಷ್ಟ 5ಮಂದಿ ಸ್ಫೋಟದಲ್ಲಿ ಮೃತಪಟ್ಟಿದ್ದಾರೆಂದು ವರದಿಯಾಗಿತ್ತು.
ಅಧ್ಯಕ್ಷರು ಮತ್ತು ಮಿಲಿಟರಿ ಮುಖ್ಯಸ್ಥರ ನಡುವೆ ಕೆಲವು ತಿಂಗಳುಗಳಿಂದ ವೈಮನಸ್ಸಿತ್ತೆಂದು ಹೇಳಲಾಗಿದೆ. ಕಳೆದ ನವೆಂಬರ್‌ನಲ್ಲಿ ಸೈನಿಕರು ಅಧ್ಯಕ್ಷರ ಅರಮನೆಯ ಮೇಲೆ ಸ್ವಯಂಚಾಲಿತ ಶಸ್ತ್ರಗಳಿಂದ ನಡೆಸಿದ ದಾಳಿ ವಿಫಲವಾಗಿತ್ತು. |