ವೆನೆಜುವೆಲಾ ಅಧ್ಯಕ್ಷ ಹೂಗೊ ಚಾವೆಜ್‌ಗೆ ಮಾತನಾಡುವುದನ್ನು ನಿಲ್ಲಿಸಿ ಎಂದು ಕೆಲವೇ ಜನರು ಹೇಳಬಹುದು. ಚಾವೆಜ್ ಭಾಷಣ ಷುರುಮಾಡಿದರೆಂದರೆ ಅವರ ವಾಕ್‌ಪ್ರವಾಹ ಐದಾರು ಗಂಟೆಗಳವರೆಗೆ ನಿರರ್ಗಳವಾಗಿ ಹರಿಯುತ್ತದೆ. ಗಂಟಲು ನೋವನ್ನು ನಿಲ್ಲಿಸಲು 3 ದಿನಗಳವರೆಗೆ ಬಾಯಿ ಮುಚ್ಚಿಕೊಳ್ಳುವಂತೆ ಅವರ ವೈದ್ಯರು ಸಲಹೆ ಮಾಡಿದ್ದಾರೆ.
ತಾವು ತಮ್ಮ ಮಾತಿನ ಫಿರಂಗಿಯನ್ನು ಸತತವಾಗಿ, ನಿರರ್ಗಳವಾಗಿ ಹರಿಯಬಿಡುವುದರಿಂದ ಯಾವುದೇ ದುಷ್ಪರಿಣಾಮ ಬೀರಿಲ್ಲ. ಆದರೆ ವೈದ್ಯರು ಬಾಯಿಮುಚ್ಚುವಂತೆ ಸೂಚಿಸಿದ್ದಾರೆಂದು' ಚಾವೆಜ್ ಪ್ರೇಕ್ಷಕರ ನಗುವಿನ ನಡುವೆ ಹೇಳಿದರು. ಮೌನ ತಮಗೆ ಉತ್ತಮ ಔಷಧಿಯಲ್ಲವೆಂದೂ ಮಾತನಾಡುತ್ತಿದ್ದರೇ ತಮಗೆ ಸ್ಫೂರ್ತಿ ಉಕ್ಕುತ್ತದೆಂದೂ ಅವರು ಹೇಳಿದ್ದಾರೆ.
2007ರ ಶೃಂಗಸಭೆಯಲ್ಲಿ ಸ್ಪೇನ್ ದೊರೆ ಜಾನ್ ಕಾರ್ಲೋಸ್ ಚಾವೆಜ್ ಬಾಯಿಮುಚ್ಚಿಸಲು 'ಶಟ್‌ಅಪ್'ಎಂದು ಸೂಚಿಸಿದ್ದರಿಂದ ರಾಜತಾಂತ್ರಿಕ ವಿವಾದ ಭುಗಿಲೆದ್ದಿತು. ಇತ್ತೀಚಿನ ತಿಂಗಳುಗಳಲ್ಲಿ ಎರಡು ಸತತ ಚುನಾವಣೆ ಸ್ಪರ್ಧೆಗಳು ಚಾವೆಜ್ ಗಂಟಲಿಗೆ ಗಂಡಾಂತರ ಉಂಟುಮಾಡಿತು.
ಗಂಟೆಗಟ್ಟಲೆ ಭಾಷಣ ಬಿಗಿಯುತ್ತಾ ಜತೆಯಲ್ಲಿ ಹಾಡುಹೇಳುತ್ತಾ, ಕೂಗುವ ಚಾವೆಜ್ ಗಂಟಲು ಕೈಕೊಟ್ಟಿತು. ಕಳೆದ ಜನವರಿಯಲ್ಲಿ ಚಾವೆಜ್ ಸತತವಾಗಿ 7 ಗಂಟೆ ವಿರಾಮವಿಲ್ಲದೇ ಭಾಷಣ ಬಿಗಿದಿದ್ದರು. |