ಹಮಾಸ್ ಹಿಂಸಾಚಾರವನ್ನು ತ್ಯಜಿಸಿ ಇಸ್ರೇಲ್‌ನ್ನು ಗುರುತಿಸುವ ತನಕ ಹಮಾಸ್ ಜತೆ ಯಾವುದೇ ಮಾತುಕತೆಯನ್ನು ನಡೆಸುವ ಪ್ರಸ್ತಾಪವನ್ನು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ತಳ್ಳಿಹಾಕಿದ್ದಾರೆ.
ಗಾಜಾದಲ್ಲಿ ಈಜಿಪ್ಟ್ ಪ್ರಾಯೋಜಿತ ಅಂತಾರಾಷ್ಟ್ರೀಯ ನೆರವು ಸಭೆಯಲ್ಲಿ ಭಾಗವಹಿಸಿ ಶರಮ್ ಎಲ್-ಶೇಕ್‌ನಲ್ಲಿ ವರದಿಗಾರರ ಜತೆ ಮಾತನಾಡಿದ ಕ್ಲಿಂಟನ್, ಇದು ಅಮೆರಿಕದ ನಿಲುವು ಮಾತ್ರವಲ್ಲದೇ ವಿಶ್ವಸಂಸ್ಥೆ, ರಷ್ಯಾ ಮತ್ತು ಐರೋಪ್ಯ ಒಕ್ಕೂಟದ ದೃಷ್ಟಿಕೋನವಾಗಿದೆ.
ಅರಬ್ ಲೀಗ್ ಕೂಡ ಇದೇ ಅಭಿಪ್ರಾಯ ಹೊಂದಿದೆ ಎಂದು ಹೇಳಿದರು.ಇಸ್ರೇಲನ್ನು ಗುರುತಿಸಿ, ಹಿಂಸಾಚಾರ ತ್ಯಜಿಸಿ, ಪೂರ್ವಭಾವಿ ಪಿಎಲ್‌ಒ ಒಪ್ಪಂದಗಳಿಗೆ ಸಮ್ಮತಿಸುವ ತನಕ ನಾವು ಹಮಾಸ್ ಜತೆ ಮಾತುಕತೆ ನಡೆಸುವುದಿಲ್ಲ ಎಂದು ಅವರು ಹೇಳಿದರು. ಗಾಜಾದಿಂದ ನಿರಂತರ ರಾಕೆಟ್ ದಾಳಿಗಳ ಮುಂದುವರಿಕೆ ಬಗ್ಗೆ ಕ್ಲಿಂಟನ್ ಆತಂಕ ವ್ಯಕ್ತಪಡಿಸಿದರು.
'ನಾವು ದೀರ್ಘಕಾಲದ ಕದನವಿರಾಮಕ್ಕೆ ಒಪ್ಪುವಂತೆ ಎಲ್ಲ ರಾಷ್ಟ್ರಗಳಿಗೆ ಕರೆ ನೀಡುತ್ತೇವೆ. ಆದರೆ ತಮ್ಮ ಜನರ ಮೇಲೆ ರಾಕೆಟ್ ಸುರಿಮಳೆಯಾಗುವಾಗ ಕುಳಿತು ಮಾತುಕತೆ ನಡೆಸುವುದು ಯಾವುದೇ ರಾಷ್ಟ್ರಕ್ಕೆ ಕಷ್ಟ. ಇಸ್ರೇಲ್ ಸಮಸ್ಯೆಯ ತಿರುಳು ಅದೇ ಆಗಿದೆ. ಇಂತಹ ದಾಳಿ ನಡೆಯುವಾಗ ಅವರು ಹೇಗೆ ಪ್ರತಿಕ್ರಿಯಿಸುತ್ತಾರೆಂದು ತಿಳಿದಿದ್ದೀರಿ' ಎಂದು ಹಿಲರಿ ಕ್ಲಿಂಟನ್ ಪ್ರಶ್ನಿಸಿದ್ದಾರೆ. |