ಮಾರ್ಚ್ 3 ಹಾಗೂ 4ರಂದು ಮಹಾತ್ಮಾ ಗಾಂಧಿ ಸ್ಮರಣಿಕೆಗಳ ಹರಾಜಿಗೆ ನಿರ್ಧರಿಸಲಾಗಿದ್ದ ಅಮೆರಿಕ ಮೂಲದ ಮಾಲೀಕರು ಈ ಅಪರೂಪದ ಸಂಗ್ರಹವನ್ನು ಭಾರತಕ್ಕೆ ಕೊಡುಗೆಯಾಗಿ ನೀಡುವ ಪ್ರಸ್ತಾಪ ಮಂಡಿಸಿದ್ದಾರೆ.
ಆದರೆ ತನ್ನ ಒಟ್ಟು ದೇಶೀಯ ಉತ್ಪನ್ನದಲ್ಲಿ ಶೇ. 5ರಷ್ಟನ್ನಾದರೂ ಬಡಜನರಿಗೆ ಭಾರತ ವೆಚ್ಚಮಾಡಿದರೆ ತಾವು ಗಾಂಧಿಗೆ ಸೇರಿದ ಆಸ್ತಿಯನ್ನು ದಾನ ಮಾಡುವುದಾಗಿ ಅವರು ಷರತ್ತು ವಿಧಿಸಿದ್ದಾರೆ.
ಗಾಂಧಿಯವರ ಐದು ವೈಯಕ್ತಿಕ ವಸ್ತುಗಳಾದ ಲೋಹದ ಅಂಚಿನ ಕನ್ನಡಕ, ಪಾಕೆಟ್ ಗಡಿಯಾರ, ಒಂದು ಜತೆ ಚಪ್ಪಲಿ, ಪ್ಲೇಟ್ ಮತ್ತು ಬೊಗುಣಿಯು ಜೇಮ್ಸ್ ಒಟಿಸ್ ಬಳಿಯಿದೆ. ಗಾಂಧೀಜಿಯ ವಸ್ತುಗಳು ರಾಷ್ಟ್ರೀಯ ಪಾರಂಪರಿಕ ಆಸ್ತಿಯೆಂಬ ಆಧಾರದ ಮೇಲೆ ಅವುಗಳನ್ನು ಸ್ವಾಧೀನಕ್ಕೆ ತೆಗೆದುಕೊಳ್ಳುವಂತೆ ಭಾರತ ಸರಕಾರದ ಮೇಲೆ ತೀವ್ರ ಒತ್ತಡ ಬಂದಿತ್ತು.
ಸರಕಾರ ಬಡವರಿಗೆ ಜಿಡಿಪಿಯ ಶೇ.5ನ್ನು ಮೀಸಲಿಡುವ ನಿರ್ಧಾರ ಅಥವಾ ಗಾಂಧೀಜಿಯವರ ಹೃದಯಕ್ಕೆ ಸಾಮಿಪ್ಯ ಹೊಂದಿರುವ ಬಡವರಿಗೆ ಕೆಲವು ಪ್ರಮುಖ ಯೋಜನೆಯನ್ನು ಅಥವಾ ಬೇರಾವುದೇ ಯೋಜನೆಯನ್ನು ಅವರ ಅನುಕೂಲಕ್ಕೆ ಪ್ರಕಟಿಸಿದರೆ ತಾವು ಈವಸ್ತುಗಳನ್ನು ದಾನ ಮಾಡುವುದಾಗಿ ಒಟಿಸ್ ಹೇಳಿದ್ದಾರೆ.
ಹರಾಜಿಗೆ ಸಿದ್ಧವಾಗಿರುವ ಗಾಂಧೀಜಿಯ ಐದು ವಸ್ತುಗಳೊಂದಿಗೆ ಇನ್ನೂ ಎರಡು ವಸ್ತುಗಳನ್ನು ಸೇರಿಸಿದ್ದು, ದೆಹಲಿಯ ಐರ್ವಿನ್ ಆಸ್ಪತ್ರೆಯಲ್ಲಿ ಗಾಂಧೀಜಿಯ ರಕ್ತದ ವರದಿ ಮತ್ತು ಅಹಿಂಸಾ ಹೋರಾಟದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಗಾಂಧೀಜಿ ಕಳಿಸಿದ ಸಹಿ ಮಾಡಿದ ಟೆಲಿಗ್ರಾಂ ಸಹ ಸೇರಿದೆ ಎಂದು ಒಟಿಸ್ ಹೇಳಿದ್ದಾರೆ. |