ರಿಯಾಲಿಟಿ ಸ್ಟಾರ್ ಜೇಡ್ ಗೂಡಿಗೆ ಆವರಿಸಿರುವ ಕ್ಯಾನ್ಸರ್ ಕಾಯಿಲೆ ಮೆದುಳಿಗೆ ಪ್ರವೇಶಿಸಿದ್ದು, ಹೊಟ್ಟೆಯಲ್ಲಿ ಭೀಕರ ನೋವಿನ ಶಮನಕ್ಕೆ ಶಸ್ತ್ರಕ್ರಿಯೆಗೆ ಒಳಪಡಿಸಲಾಗಿದೆ.
ಬಿಗ್ ಬ್ರದರ್ ಶೋನ ಸ್ಟಾರ್ ಜೇಡ್ ಗೂಡಿ ಕಳೆದ ವರ್ಷದಿಂದ ಮಾರಣಾಂತಿಕ ಸರ್ವಿಕ್ಸ್ ಕ್ಯಾನ್ಸರ್‌ನಿಂದ ಪೀಡಿತರಾಗಿದ್ದು, ಅದು ಪಿತ್ತಜನಕಾಂಗ, ಕರುಳಿಗೂ ವಿಸ್ತರಿಸಿದೆ. ಆಕೆಯ ರಕ್ತದಲ್ಲಿ ಮುಕ್ತವಾಗಿ ಸಂಚರಿಸುವ ಕ್ಯಾನ್ಸರ್ ಮೆದುಳಿಗೂ ಹರಡಿದೆ ಎಂದು ಗೂಡಿಗೆ ತಿಳಿಸಲಾಗಿದೆಯೆಂದು ಆಕೆಯ ಸ್ನೇಹಿತೆ ಹೇಳಿದ್ದಾರೆ.
ಮೆದುಳಿಗೆ ಕ್ಯಾನ್ಸರ್ ಹರಡಿದ್ದರಿಂದ ಆಗಾಗ್ಗೆ ಮೂರ್ಛೆ ರೋಗ, ತೀವ್ರ ತಲೆನೋವು, ವಾಂತಿಯ ಲಕ್ಷಣಗಳು ಕಂಡುಬಂದಿದೆ. ಇದು ಅನಿರೀಕ್ಷಿತವಲ್ಲದಿದ್ದರೂ ಮುಂದೆ ಕಾದಿರುವುದನ್ನು ನೋವಿನಿಂದ ನೆನಪಿಸುತ್ತದೆಂದು ಅವರು ಹೇಳಿದ್ದಾರೆ. 'ಜೇಡ್ ಮನೆಗೆ ಹಿಂತಿರುಗಲು ಬಯಸಿದ್ದರೂ, ಆಕೆ ನೋವನ್ನು ಸಹಿಸಿಕೊಳ್ಳಲು ಸೂಕ್ತವಾದ ಔಷಧಿಗಳನ್ನು ನೀಡಬೇಕಾಗಿದೆ.
ಆಕೆಯ ಮಕ್ಕಳು ಸಂಕಟ ಪಡುವುದು ಗೂಡಿಗೆ ಇಷ್ಟವಿಲ್ಲ' ಎಂದು ಅವರ ಏಜಂಟ್ ತಿಳಿಸಿದ್ದಾರೆ.27ರ ಪ್ರಾಯದ ಗೂಡಿಯನ್ನು ಲಂಡನ್ ರಾಯಲ್ ಮಾರ್ಸ್‌ಡೆನ್ ಆಸ್ಪತ್ರೆಯಿಂದ ಸಮೀಪದ ಚೆಲ್ಸಿಯ ಮತ್ತು ವೆಸ್ಟ್‌ಮಿನಿಸ್ಟರ್ ಆಸ್ಪತ್ರೆಗೆ ಶಸ್ತ್ರಚಿಕಿತ್ಸೆ ಸಲುವಾಗಿ ವರ್ಗಾಯಿಸಲಾಯಿತು. |