ಜಪಾನ್ ದೇಶದಲ್ಲಿ 100ರ ಗಡಿದಾಟಿದ ಶತಾಯುಷಿಗಳ ಸಂಖ್ಯೆ ಏರುಗತಿಯಲ್ಲಿ ಸಾಗಿದ್ದು, ಶತಕ ಬಾರಿಸಿದ ಹಿರಿಯ ಜೀವಿಗಳಿಗೆ ಬಹುಮಾನವಾಗಿ ನೀಡುವ ಬೆಳ್ಳಿಕಪ್ ಗಾತ್ರವನ್ನು ಜಪಾನ್ ತಗ್ಗಿಸಿದೆ.
ವಿಶ್ವದಲ್ಲೇ ಅತ್ಯಂತ ಹೆಚ್ಚು ಶತಾಯುಷಿಗಳ ದೇಶವೆಂದು ಖ್ಯಾತಿ ಪಡೆದಿರುವ ಜಪಾನಿನಲ್ಲಿ ಕಳೆದ ವರ್ಷ 19,769 ಜನರು ಮೂರಂಕಿಯ ಗಡಿಯನ್ನು ದಾಟಿದ್ದರು. 1963ರಲ್ಲಿ ಬೆಳ್ಳಿಕಪ್ ನೀಡಿದಾಗ ಕೇವಲ 153 ಮಂದಿ 100ರ ಗಡಿ ದಾಟಿದ ವಯೋವೃದ್ಧರಿದ್ದರು. ಬೆಳ್ಳಿಕಪ್ಪಿನ ವ್ಯಾಸವನ್ನು 10.5 ಸೆಂ.ಮೀ.ನಿಂದ 9 ಸೆಂ.ಮೀ.ಗೆ ತಗ್ಗಿಸಿದರೆ ಅದರಿಂದ ಯಾವುದೇ ವ್ಯತ್ಯಾಸ ಕಾಣುವುದಿಲ್ಲ ಎಂದು ಆರೋಗ್ಯ ಸಚಿವಾಲಯದ ಅಧಿಕಾರಿ ತಿಳಿಸಿದ್ದಾರೆ.
ಕಳೆದ ವರ್ಷ 100ರ ಗಡಿ ದಾಟಿದ ಜನರಿಗೆ ಸೆ.15ರಂದು ಕಪ್ ಬಹುಮಾನವಾಗಿ ನೀಡಲಾಯಿತು. ಬೆಳ್ಳಿಯ ಗುಣಮಟ್ಟದ ಆಧಾರದ ಮೇಲೆ ವೆಚ್ಚದಲ್ಲಿ ವ್ಯತ್ಯಾಸವಾದರೂ, ಮರದ ಬಹುಮಾನದ ಪೆಟ್ಟಿಗೆ ಸೇರಿದಂತೆ 72-82 ಡಾಲರ್ ವೆಚ್ಚ ತಗಲಬಹುದು ಎಂದು ಸುದ್ದಿಪತ್ರಿಕೆಯೊಂದು ತಿಳಿಸಿದೆ. ಜಪಾನಿನಲ್ಲಿ ದೀರ್ಘಾಯುಷಿ ಜನರಿದ್ದು, ಆಹಾರಕ್ರಮ, ಆರೋಗ್ಯಸೇವೆ ಸೇರಿದಂತೆ ಅನೇಕ ಅಂಶಗಳು ಕೊಡುಗೆ ನೀಡಿದೆ. 127.8 ಮಿಲಿಯ ಜನಸಂಖ್ಯೆಯಲ್ಲಿ ಶತಕದ ಗಡಿದಾಟಿದ 36,436 ಜನರು ಜಪಾನಿನಲ್ಲಿದ್ದಾರೆ. |