ಸ್ವದೇಶದಲ್ಲಿ ಆಂತರಿಕ ಯುದ್ಧಕ್ಕೆ ಶ್ರೀಲಂಕಾ ಕ್ರಿಕೆಟ್ ತಂಡ ಒಡ್ಡಿಕೊಂಡಿದ್ದರಿಂದ ಪಾಕಿಸ್ತಾನದಲ್ಲಿ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದಾಗ ತಕ್ಷಣದಲ್ಲೇ ಪ್ರತಿಕ್ರಿಯಿಸಿದ್ದಾಗಿ ಶ್ರೀಲಂಕಾ ಕ್ರಿಕೆಟ್ ತಂಡದ ನಾಯಕ ಮಹೇಲಾ ಜಯವರ್ಧನೆ ಬುಧವಾರ ತಾಯ್ನಾಡಿಗೆ ಬಂದಿಳಿದ ಬಳಿಕ ಉಗ್ರರ ದಾಳಿ ಬಗ್ಗೆ ಪ್ರತಿಕ್ರಿಯೆ ನೀಡುತ್ತಾ ಮಾತನಾಡಿದರು. ಮಂಗಳವಾರ ನಡೆದ ಗುಂಡಿನ ದಾಳಿಯಲ್ಲಿ ತಂಡದ ಏಳು ಮಂದಿ ಆಟಗಾರರು ಮತ್ತು ಸಹಾಯಕ ಕೋಚ್ ಗಾಯಗೊಂಡಿದ್ದರು. ಈ ದಾಳಿಯಲ್ಲಿ 8 ಜನರು ಹತರಾಗಿದ್ದರು. ಗುಂಡಿನ ದಾಳಿ ನಡೆದ ಕೂಡಲೇ ಶ್ರೀಲಂಕಾ ಆಟಗಾರರು ಆಸನದ ಅಡಿಯಲ್ಲಿ ಬಗ್ಗಿ ಕುಳಿತರು. ಭಯೋತ್ಪಾದನೆ ಚಟುವಟಿಕೆಗಳ ಹಿನ್ನೆಲೆಯಲ್ಲಿ ನಾವು ಬೆಳೆದಿದ್ದರಿಂದ ತಕ್ಷಣವೇ ಪ್ರತಿಕ್ರಿಯಿಸಲು ಸಾಧ್ಯವಾಯಿತು ಎಂದು ಕೊಲಂಬೊದಲ್ಲಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಬಂದಿಳಿದ ಕೂಡಲೇ ಅವರು ವರದಿಗಾರರಿಗೆ ತಿಳಿಸಿದರು. 'ನಮಗೆ ಸ್ವದೇಶದಲ್ಲಿ ಗುಂಡಿನದಾಳಿ, ಬಾಂಬ್ ದಾಳಿಗಳನ್ನು ನೋಡಿ, ಕೇಳಿ ಅಭ್ಯಾಸವಾಗಿದ್ದರಿಂದ ಗುಂಡಿನ ದಾಳಿ ನಡೆದ ಕೂಡಲೇ ನಮ್ಮ ಆಸನದ ಅಡಿಯಲ್ಲಿ ಕುಳಿತೆವು. ಇದೊಂದು ಸಹಜ ಪ್ರವೃತ್ತಿಯಂತೆ ಕಾಣಿಸಿತು' ಎಂದು ಅವರು ಹೇಳಿದ್ದಾರೆ.ಪ್ರತ್ಯೇಕ ತಾಯ್ನಾಡಿಗಾಗಿ ಹೋರಾಡುತ್ತಿರುವ ತಮಿಳು ವ್ಯಾಘ್ರ ಬಂಡುಕೋರರ ಜತೆ ಶ್ರೀಲಂಕಾ ನಾಲ್ಕು ದಶಕಗಳ ಕಾಲದ ಜನಾಂಗೀಯ ಕದನದಲ್ಲಿ ನಿರತವಾಗಿದೆ.ಈ ಭಯಾನಕ ಘಟನೆಯಿಂದ ಆಟಗಾರರಿಗೆ ಆಘಾತವಾಗಿದ್ದು, ಮಾನಸಿಕವಾಗಿ ಕುಸಿದಿದ್ದಾರೆಂದು ಹೇಳಿದ ಅವರು, ಗುಂಡಿನ ದಾಳಿ ನಡೆದಾಗ ತಾವು ಮನೆಗೆ ಪುನಃ ಹಿಂತಿರುಗುತ್ತೇನೆಂದು ಭಾವಿಸದಿರುವ ಕ್ಷಣವೂ ಇತ್ತೆಂದು ಅವರು ಹೇಳಿದರು. ತಾವು ಅಥವಾ ತಂಡದ ಬೇರೆಯವರು ಪಾಕಿಸ್ತಾನದ ಮುಂದಿನ ಪ್ರವಾಸಗಳನ್ನು ತಪ್ಪಿಸಿಕೊಳ್ಳುತ್ತೀರಾ ಎಂಬ ಪ್ರಶ್ನೆಗೆ ಇಷ್ಟು ಬೇಗ ಅದನ್ನು ಹೇಳಲು ಆಗುವುದಿಲ್ಲ ಎಂದು ನುಡಿದರು. ನಮಗೆ ಭದ್ರತಾ ಲೋಪಗಳ ಬಗ್ಗೆ ಅರಿವಿರಲಿಲ್ಲ. ಇದೊಂದು ದುರದೃಷ್ಟಕರ ಘಟನೆ. ಘಟನೆಯ ಹಿನ್ನೋಟ ಹರಿಸಿದಾಗ ಇದು ವಿಶ್ವದಲ್ಲಿ ಎಲ್ಲಿ ಬೇಕಾದರೂ ನಡೆಯಬಹುದು ಎಂದು ಅವರು ನುಡಿದರು. |