ಸ್ವಾತ್ ಕಣಿವೆಯಲ್ಲಿ ತಾಲಿಬಾನ್ ಜತೆ ತಾವು ವ್ಯವಹರಿಸಿಲ್ಲ ಎಂದು ಅಧ್ಯಕ್ಷ ಅಸೀಫ್ ಅಲಿ ಜರ್ದಾರಿ ಬುಧವಾರ ತಿಳಿಸಿರುವ ಅವರು, ಉಗ್ರರ ವಿರುದ್ಧದ ಸೋಲು ತಮ್ಮ ಆಯ್ಕೆಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಭಯೋತ್ಪಾದನೆ ವಿರುದ್ಧ ಪಾಕಿಸ್ತಾನದ ಸಮರದಲ್ಲಿ ಸೋಲು ನಮ್ಮ ಆಯ್ಕೆಯಲ್ಲ ಎಂದು ಅಧ್ಯಕ್ಷ ಅಸೀಫ್ ಅಲಿ ಜರ್ದಾರಿ ಬುಧವಾರದ ವಾಲ್ ಸ್ಟ್ರೀಟ್ ನಿಯತಕಾಲಿಕೆಯಲ್ಲಿ ಪ್ರಕಟವಾದ ಲೇಖನದಲ್ಲಿ ತಿಳಿಸಿದ್ದಾರೆ. 'ಇದು ನಮ್ಮ ಅಸ್ತಿತ್ವಕ್ಕಾಗಿ ಹೋರಾಟ. ಇದರಲ್ಲಿ ಸೋತರೆ ಇಡೀ ವಿಶ್ವವೇ ಸೋಲುತ್ತದೆ. ಆದ್ದರಿಂದ ಸೋಲು ನಮ್ಮ ಆಯ್ಕೆಯಲ್ಲ' ಎಂದು ಶ್ರೀಲಂಕಾ ಕ್ರಿಕೆಟ್ ತಂಡದ ಮೇಲೆ ಮುಂಬೈ ಶೈಲಿಯ ದಾಳಿ ನಡೆದ ಮರುದಿನವೇ ಅವರು ಹೇಳಿದರು. ಮಂಗಳವಾರದ ದಾಳಿಯು ನಾವು ಎದುರಿಸುತ್ತಿರುವ ಕೆಡುಕಿನ ದಿಗ್ದರ್ಶನ ಎಂದು ಜರ್ದಾರಿ ಹೇಳಿದರು.
ನಾವು ತೀವ್ರವಾದಿ ತಾಲಿಬಾನ್ ಮತ್ತು ಭಯೋತ್ಪಾದಕರ ಜತೆ ಮಾತುಕತೆ ನಡೆಸುವುದಿಲ್ಲ ಎಂದು ಸರ್ಕಾರದ ಪರವಾಗಿ ಮಾತನಾಡಿದ ಅವರು, ಸ್ವಾತ್ ಕಣಿವೆಯಲ್ಲಿ ಕುದುರಿಸಿದ ಒಪ್ಪಂದವು ತಾಲಿಬಾನ್ ಜತೆ ಮಾಡಿಕೊಂಡಿದ್ದಲ್ಲವೆಂದು ಸ್ಪಷ್ಟಪಡಿಸಿದರು.
ನಾವು ಧಾರ್ಮಿಕ ನಾಯಕರ ಜತೆ ವ್ಯವಹರಿಸಿದ್ದೇವೆಯೇ ಹೊರತು ತಾಲಿಬಾನಿಗಳ ಜತೆಯಲ್ಲ ಎಂದು ಹೇಳಿದ ಅವರು, ತಾಲಿಬಾನ್ ಮತ್ತಿತರ ಬಂಡುಕೋರರಿಗೆ ಲಗಾಮು ಹಾಕಿ ನಿಷ್ಕ್ರಿಯಗೊಳಿಸುವುದು ಅವರ ಜವಾಬ್ದಾರಿ ಎಂದು ನುಡಿದರು. ಬಂಡುಕೋರರನ್ನು ಹದ್ದುಬಸ್ತಿನಲ್ಲಿಡಲು ಸ್ವಾಟ್ ಕಣಿವೆ ಅಧಿಕಾರವರ್ಗ ವಿಫಲವಾದರೆ ನಮ್ಮ ಭದ್ರತಾಪಡೆಗಳು ಕಾರ್ಯಾಚರಿಸುತ್ತವೆ ಎಂದು ಅವರು ನುಡಿದರು. |