ಶ್ರೀಲಂಕಾ ಕ್ರಿಕೆಟ್ ತಂಡದ ಮೇಲೆ ಭಯೋತ್ಪಾದನೆ ದಾಳಿಗೆ ಸಂಬಂಧಿಸಿದಂತೆ ಪಾಕ್ ಅಧಿಕಾರಿಗಳು ಸುಮಾರು 12 ಶಂಕಿತರನ್ನು ಬಂಧಿಸಿದ್ದಾರೆ. ದಾಳಿಕೋರರ ಬಗ್ಗೆ ಮಾಹಿತಿ ನೀಡಿದವರಿಗೆ ಒಂದು ಕೋಟಿ ರೂ.ಬಹುಮಾನವನ್ನೂ ಸರ್ಕಾರ ಘೋಷಿಸಿದೆ.
ಗುಲಬರ್ಗ್ ವಸತಿನಿಲಯಗಳು ಮತ್ತು ಅತಿಥಿಗ್ರಹಗಳ ಮೇಲೆ ವಿಶೇಷ ತನಿಖಾ ತಂಡದ ದಾಳಿಗಳಲ್ಲಿ ಕನಿಷ್ಠ 12 ಶಂಕಿತರನ್ನು ಬಂಧಿಸಲಾಗಿದೆ. ಆದಾಗ್ಯೂ, ಬಂಧಿತರಲ್ಲಿ ಮುಖ್ಯ ಶಂಕಿತರು ಯಾರೂ ಇಲ್ಲ ಮತ್ತು ತನಿಖೆಯಲ್ಲಿ ಯಾವುದೇ ಹೊಸ ಬೆಳವಣಿಗೆಯಾಗಿಲ್ಲ ಎಂದು ವರದಿಗಳು ತಿಳಿಸಿವೆ.
ಭಯೋತ್ಪಾದಕರ ಬಂಧನಕ್ಕೆ ಸುಳಿವು ನೀಡಿದವರಿಗೆ 1 ಕೋಟಿ ರೂ. ಬಹುಮಾನವನ್ನು ಪಂಜಾಬ್ ಪ್ರಾಂತ್ಯದ ಸರ್ಕಾರದ ಘೋಷಿಸಿದೆ. ದಾಳಿಕೋರರ ಜಾಡು ಪತ್ತೆಹಚ್ಚಲು ಸಾರ್ವಜನಿಕರ ನೆರವನ್ನು ಪತ್ರಿಕೆಗಳ ಜಾಹೀರಾತುಗಳಲ್ಲಿ ಕೋರಲಾಗಿದೆ.
ಪಂಜಾಬ್ ಗವರ್ನರ್ ಸಲ್ಮಾನ್ ತಸೀರ್ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ದಾಳಿಯ ಬಗ್ಗೆ ಕೆಲವು ಸುಳಿವುಗಳು ಪತ್ತೆಯಾಗಿದ್ದು, ಘಟನೆಗೆ ಯಾರು ಹೊಣೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲವೆಂದು ತಿಳಿಸಿದರು. ಭದ್ರತಾ ಲೋಪದೋಷಗಳು ಘಟಿಸಿದ್ದರೆ, ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದ್ದಾರೆ.
|