ಪಾಕಿಸ್ತಾನದ ಟೆಸ್ಟ್ ಸರಣಿಯ ಮಧ್ಯೆ ಲಾಹೋರ್‌ನಲ್ಲಿ ಶ್ರೀಲಂಕಾ ತಂಡದ ಮೇಲೆ ಉಗ್ರರು ದಾಳಿ ನಡೆಸಿದ ಬಳಿಕದ ದುಷ್ಪರಿಣಾಮಗಳು ಈಗಲೇ ಕಾಣಿಸಿಕೊಳ್ಳುತ್ತಿವೆ. ಪಾಕಿಸ್ತಾನದ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಗಳಿಗೆ ಇದು ಕೊನೆಹಾಡಲಿದೆ ಎಂದು ಖಚಿತವಾಗಿ ಹೇಳಬಹುದು.
ಶ್ರೀಲಂಕಾ ತಂಡದ ಮೇಲೆ ಭಯೋತ್ಪಾದನೆ ದಾಳಿಯನ್ನು ಭಾರತದ ಅಭಿಮಾನಿಗಳು ಖಂಡಿಸಿದ್ದಾರೆ. ಆದರೆ ಭಾರತವೊಂದೇ ಈ ಘಟನೆಯಿಂದ ದಿಗ್ಭ್ರಮೆಗೀಡಾಗಿಲ್ಲ. ಪಾಕಿಸ್ತಾನದ ಮಾಜಿ ನಾಯಕ ಇಮ್ರಾನ್ ಖಾನ್, ಪಾಕಿಸ್ತಾನದ ಕ್ರೀಡಾಇತಿಹಾಸದಲ್ಲೇ ಅತೀ ದುರಂತಕಾರಿ ಘಟನೆ ಎಂದು ಹೇಳಿದ್ದಾರೆ.
'ಇದು ಪಾಕ್ ಭದ್ರತಾ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಶ್ರೀಲಂಕಾ ಕ್ರಿಕೆಟ್ ತಂಡಕ್ಕೆ ಭದ್ರತೆ ಒದಗಿಸುವ ಖಾತರಿ ನೀಡಿದ ಬಳಿಕ ಈ ಘಟನೆಯಿಂದ ನಾಚಿಕೆಪಡುವಂತಾಗಿದೆ' ಎಂದು ಅವರು ಪ್ರತಿಕ್ರಿಯಿಸಿದ್ದಾರೆ.ಇದರ ಪ್ರತಿಘಾತ ಈಗಾಗಲೇ ಆರಂಭವಾಗಿದೆ. ಕರಾಚಿಯಲ್ಲಿ 2002 ಸ್ಫೋಟದ ಬಳಿಕ ಟೆಸ್ಟ್ ಪಂದ್ಯವಾಡಿರದ ನ್ಯೂಜಿಲೆಂಡ್ ನವೆಂಬರ್ನಲ್ಲಿ ಪಾಕ್ ಪ್ರವಾಸವನ್ನು ರದ್ದುಮಾಡಬಹುದು. ಆಸ್ಟ್ರೇಲಿಯ ಕೂಡ ಪಾಕಿಸ್ತಾನದ ಬದಲಿಗೆ ಇಂಗ್ಲೆಂಡ್‌ನಲ್ಲಿ ಟೆಸ್ಟ್ ಪಂದ್ಯಗಳನ್ನು ಆಡಬಹುದು ಎಂದು ಅವರು ಹೇಳಿದ್ದಾರೆ. ಪಾಕಿಸ್ತಾನಕ್ಕೆ ಇದು ಕೆಟ್ಟ ಸುದ್ದಿಯಾಗದಿದ್ದರೂ 2011ರ ವಿಶ್ವಕಪ್ ಸಹಪ್ರಾಯೋಜಕತ್ವ ವಹಿಸುವ ಅದರ ಅವಕಾಶಗಳಿಗೆ ಗಂಭೀರ ಪೆಟ್ಟುಬಿದ್ದಿದೆ ಎಂದು ಅವರು ನುಡಿದಿದ್ದಾರೆ. 'ಪಾಕ್ ಕ್ರಿಕೆಟ್ ಆಟಗಾರರನ್ನು ದುಷ್ಕೃತ್ಯಕ್ಕೆ ದಂಡತೆರುವಂತೆ ಮಾಡುವುದು ಸರಿಯಲ್ಲ. ಅಲ್ಲಿ ಪ್ರತಿಭಾವಂತ ಕ್ರಿಕೆಟ್ ಆಟಗಾರರಿದ್ದು ಅವರ ಭವಿಷ್ಯಕ್ಕೆ ಹಾನಿಯಾಗಬಾರದು.
ಐಸಿಸಿ ಮಧ್ಯಪ್ರವೇಶಿಸಿ, ಪಾಕಿಸ್ತಾನಕ್ಕೆ ಸಾಕಷ್ಟು ಕ್ರಿಕೆಟ್ ಪಂದ್ಯಗಳು ತಟಸ್ಥ ಮೈದಾನಗಳಲ್ಲಾದರೂ ಸಿಗುವಂತೆ ಖಾತರಿ ಮಾಡಬೇಕು' ಎಂದು ಮಾಜಿ ಶ್ರೀಲಂಕಾ ನಾಯಕ ಅಟಪಟ್ಟು ತಿಳಿಸಿದ್ದಾರೆ. ಯುಎಇನಲ್ಲಿ ಮುಂದಿನ ತಿಂಗಳ ಏಕದಿನ ಪಂದ್ಯಗಳಿಗೆ ಹಸಿರುನಿಶಾನೆ ನೀಡುವ ಮೂಲಕ ಆಸ್ಟ್ರೇಲಿಯ ಪಿಸಿಬಿಗೆ ಮೈತ್ರಿ ಸಂದೇಶ ಕಳಿಸಿದೆ. |