ಮಹಾತ್ಮಾ ಗಾಂಧಿ ಅವರ ಖಾಸಗಿ ವಸ್ತುಗಳ ಹರಾಜು ಪ್ರಕ್ರಿಯೆ ಗುರುವಾರ ನಡೆಯಲಿದ್ದು, ಅದರಲ್ಲಿ ತಾವು ಭಾಗವಹಿಸುವುದಾಗಿ ಭಾರತೀಯ ಮೂಲದ ಖ್ಯಾತ ಉದ್ಯಮಿ ಸಂತ್ ಸಿಂಗ್ ಚಾತ್‌ವಾಲ್ ಹಾಗೂ ಭಾರತೀಯ ಮೂಲದ ಕೆಲವು ಗೆಳೆಯರು ಸೇರಿರುವುದಾಗಿ ತಿಳಿಸಿದ್ದಾರೆ.
ಗಾಂಧೀಜಿಯ ಪಾಕೆಟ್ ಗಡಿಯಾರ, ಕನ್ನಡಕಗಳು, ಪ್ಲೇಟ್, ಜತೆ ಪಾದರಕ್ಷೆಗಳನ್ನು ನ್ಯೂಯಾರ್ಕ್‌ನ ಆಂಟಿಕೋರಂನಲ್ಲಿ ಮಾ.5ರಂದು ಹರಾಜು ಪ್ರಕ್ರಿಯೆ ನಡೆಯಲಿದೆ. ಆ ನಿಟ್ಟಿನಲ್ಲಿ ಗಾಂಧಿ ಅವರ ಖಾಸಗಿ ವಸ್ತುಗಳ ಹರಾಜು ಪ್ರಕ್ರಿಯೆಯಲ್ಲಿ ತಾನು ಮತ್ತು ಕೆಲವು ಹಿತೈಷಿಗಳು ಭಾಗವಹಿಸಿ, ಅದನ್ನು ಭಾರತಕ್ಕೆ ತರುವುದಾಗಿ ಚಾತ್‌ವಾಲ್ ವಿವರಿಸಿದ್ದಾರೆ.
ಸುಮಾರು 50ಮಿಲಿಯನ್ ಡಾಲರ್‌ನಷ್ಟು ಹರಾಜು ಪ್ರಕ್ರಿಯೆ ನಡೆಯಲಿದ್ದು, ಇದೊಂದು ದೊಡ್ಡ ಪ್ರಮಾಣದ ಮೊತ್ತವಲ್ಲ ಎಂದಿರುವ ಅವರು, ನಾವು 8-10 ಗೆಳೆಯರು ಗಾಂಧಿ ಅವರ ವಸ್ತುಗಳನ್ನು ಪಡೆದು, ಭಾರತಕ್ಕೆ ಅದನ್ನು ಮರಳಿಸಲಾಗುವುದು ಎಂದು ಹೇಳಿದರು.
ಮಹಾತ್ಮ ಗಾಂಧಿ ಖಾಸಗಿ ವಸ್ತುಗಳ ಹರಾಜನ್ನು ನಿಲ್ಲಿಸಲು ಅಮೆರಿಕದಲ್ಲಿ ಭಾರತದ ರಾಜತಾಂತ್ರಿಕರು ಇನ್ನಿಲ್ಲದ ಪ್ರಯತ್ನ ನಡೆಸಿದ್ದಾರೆ. ಗುರುವಾರ ನಿಗದಿಯಂತೆ ಏಲಂ ನಡೆದರೆ ಗಾಂಧೀಜಿಯ ವಸ್ತುಗಳನ್ನು ಸ್ವತಃ ಖರೀದಿಸುವ ಬಗ್ಗೆ ಸಮುದಾಯ ನಾಯಕರು ಮತ್ತು ತಂಡಗಳು ಕಾರ್ಯತಂತ್ರಗಳನ್ನು ರೂಪಿಸುತ್ತಿದೆ.
ಆದರೆ ಗಾಂಧಿ ಅವರ ಖಾಸಗಿ ವಸ್ತುಗಳ ಹರಾಜನ್ನು ನಿಲ್ಲಿಸಬೇಕೆಂಬ ಭಾರತದ ಕಾನ್ಸುಲೇಟ್‌ನ ರಾಜತಾಂತ್ರಿಕರ ಒತ್ತಡಕ್ಕೆ ಸಂಬಂಧಿಸಿದಂತೆ, ಹರಾಜು ಪ್ರಕ್ರಿಯೆಗೆ ತಡೆ ಕುರಿತು ಉನ್ನತಮಟ್ಟದ ಸಭೆ ಬಳಿಕ, ಆಂಟಿಕೋರಂ ಹರಾಜುದಾರರು ಇಂದು ರಾತ್ರಿ ತಮ್ಮ ಅಂತಿಮ ನಿರ್ಧಾರವನ್ನು ಮುಟ್ಟಿಸುವ ಭರವಸೆ ನೀಡಿದ್ದಾರೆ.
ಭಾರತದ ಅಧಿಕಾರಿಗಳ ವ್ಯಾಪಕ ಪ್ರಯತ್ನಗಳ ನಡುವೆಯೂ, ಹರಾಜು ಮನೆ ಅಥವಾ ಗಾಂಧಿ ಖಾಸಗಿ ವಸ್ತುಗಳ ಮಾಲೀಕತ್ವ ಹೊಂದಿರುವ ಜೇಮ್ಸ್ ಒಟಿಸ್ ಹರಾಜು ಪ್ರಕ್ರಿಯೆ ನಿಲ್ಲಿಸುವ ಆಸಕ್ತಿ ತೋರಿಲ್ಲ. ದೆಹಲಿ ಹೈಕೋರ್ಟ್ ಮಧ್ಯಂತರ ಆದೇಶ ನೀಡಿ ಮೌಲ್ಯಯುತ ಗಾಂಧಿ ವಸ್ತುಗಳ ಹರಾಜಿಗೆ ನಿರ್ಬಂಧ ವಿಧಿಸಿದ ಬಳಿಕ ಗಾಂಧಿಯ ಖಾಸಗಿ ವಸ್ತುಗಳನ್ನು ಹರಾಜು ಮಾಡದಂತೆ ಅಮೆರಿಕ ವಿದೇಶಾಂಗ ಇಲಾಖೆ ಜತೆ ಪ್ರಸ್ತಾಪಿಸುವುದಾಗಿ ಪ್ರವಾಸೋದ್ಯಮ ಸಚಿವೆ ಅಂಬಿಕಾ ಸೋನಿ ಹೇಳಿದ್ದರು. |