ಶ್ರೀಲಂಕಾ ಕ್ರಿಕೆಟ್ ಆಟಗಾರರ ಮೇಲೆ ಲಾಹೋರ್‌ನ ಗಡ್ಡಾಫಿ ಕ್ರೀಡಾಂಗಣದ ಬಳಿ ಮಾರಣಾಂತಿಕ ದಾಳಿ ನಡೆಸಿರುವ ಉಗ್ರಗಾಮಿ ಜಾಲವನ್ನು ತನಿಖಾತಂಡವು ಬೇಧಿಸಿರುವುದಾಗಿ ಪಾಕಿಸ್ತಾನದ ಮಾಧ್ಯಮಗಳು ವರದಿಮಾಡಿವೆ.
ಪೊಲೀಸರು ಮುಂದಿನ 18 ಗಂಟೆಗಳೊಳಗಾಗಿ ಈ ಪ್ರಮುಖ ಬೆಳವಣಿಗೆಯನ್ನು ಘೋಷಿಸಲಿದ್ದಾರೆ ಎಂದು ವರದಿಗಳು ಹೇಳಿವೆ.
ವರದಿಗಳ ಪ್ರಕಾರ ಐದು ಪ್ರಮುಖ ಶಂಕಿತರನ್ನು ಬಂಧಿಸಲಾಗಿದೆ. ಇವರಲ್ಲಿ ಇಬ್ಬರು ದಾಳಿಯಲ್ಲಿ ಭಾಗವಹಿಸಿದ್ದರೆ ಮತ್ತೆ ಮೂವರು ಇವರಿಗೆ ಸಹಾಯ ನೀಜಿದ್ದಾರೆ ಎಂದು ಹೇಳಲಾಗಿದೆ.
ದಾಳಿ ನಡೆಸಿದ ಮಾರ್ಚ್ 3ರ ಎರಡು ದಿನ ಮುಂಚಿತವಾಗಿಯೇ ಇಬ್ಬರು ಶಂಕಿತರು ಲಾಹೋರ್‌ನಲ್ಲಿ ತಂಗಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಅಲ್ಲದೆ ಇವರು ಲಿಬರ್ಟಿ ಮಾರ್ಕೆಟ್ ಪ್ರದೇಶದ ಪ್ರವೇಶ ಹಾಗೂ ನಿರ್ಗಮನ ಸ್ಥಳಗಳ ಪರಿವೀಕ್ಷಣೆ ನಡೆಸಿದ್ದಾರೆ ಎಂದೂ ಹೇಳಲಾಗಿದೆ.
ಶಂಕಿತ ಉಗ್ರರಲ್ಲೊಬ್ಬ ಕರಾಚಿಯಲ್ಲಿ ಬಂಧನಕ್ಕೀಡಾಗಿದ್ದ ವೇಳೆ ಬುರ್ಖಾ ಧರಿಸಿದ್ದ. ದಾಳಿಕೋರರು ಬಳಸಿರುವ ಸಿಮ್ ಕಾರ್ಡಿನ ಆಧಾರದಲ್ಲಿ ನಡೆಸಿದ ಕಾರ್ಯಾಚರಣೆಯ ಮೂಲಕ ದಾಳಿಗೆ ಸಹಾಯ ಒದಗಿಸಿದ ಇಬ್ಬರನ್ನು ಬಂಧಿಸಲಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. |