ಲಾಹೋರ್‌ನಲ್ಲಿ ಮತ್ತೆ ನಡೆದ ಭಯೋತ್ಪಾದನಾ ದಾಳಿ ಹಾಗೂ ರಾಜಕೀಯ ಅಸ್ಥಿರತೆಯಿಂದಾಗಿ ದೇಶದಲ್ಲಿ ಮಿಲಿಟರಿ ಆಡಳಿತ ಬರುವ ಸಾಧ್ಯತೆ ಇದೆ ಎಂದು ವರದಿಯನ್ನು ಪಾಕಿಸ್ತಾನ ಬುಧವಾರ ಸಾರಸಗಟಾಗಿ ತಳ್ಳಿಹಾಕಿದೆ.
ಮಾಜಿ ಪ್ರಧಾನಿ ನವಾಜ್ ಷರೀಫ್ ಹಾಗೂ ಸಹೋದರ ಶಾಬಾಜ್ ಅವರು, ಶ್ರೀಲಂಕಾ ಕ್ರಿಕೆಟಿಗರ ಮೇಲೆ ನಡೆದಿರುವ ದಾಳಿಯನ್ನು ಖಂಡಿಸಿ ಪ್ರತಿಕ್ರಿಯೆ ನೀಡಿದ್ದ ಅವರು, ಪಾಕ್‌ನಲ್ಲಿ ಮತ್ತೆ ಮಿಲಿಟರಿ ಆಡಳಿತ ಹೇರಿಕೆಯ ಎಲ್ಲಾ ಸಾಧ್ಯತೆಗಳಿರುವುದಾಗಿ ಗಂಭೀರವಾಗಿ ಆರೋಪಿಸಿದ್ದರು.
ಅಲ್ಲದೇ ಪಾಕ್ ಮಾಧ್ಯಮಗಳ ವರದಿ ಕೂಡ, ಪಾಕಿಸ್ತಾನದಲ್ಲಿ ಮಿಲಿಟರಿ ಆಡಳಿತ ಸಾಧ್ಯತೆ ಇರುವುದಾಗಿ ಹೇಳಿದ್ದವು. ಈ ವರದಿ ಸತ್ಯಾಂಶದಿಂದ ಕೂಡಿಲ್ಲ ಎಂದು ವಿದೇಶಾಂಗ ಕಾರ್ಯಾಲಯದ ವಕ್ತಾರ ಅಬ್ದುಲ್ ಬಾಸಿಟ್ ಟೈಮ್ಸ್ ನೌ ಚಾನೆಲ್ ಜತೆ ಮಾತನಾಡುತ್ತ ಸ್ಪಷ್ಟನೆ ನೀಡಿದ್ದಾರೆ.
ದೇಶದಲ್ಲಿ ಪ್ರಜಾಸತ್ತಾತ್ಮಕ ಚುನಾಯಿತ ಸರಕಾರವಿದೆ, ಆ ನಿಟ್ಟಿನಲ್ಲಿ ಮಿಲಿಟರಿ ಆಡಳಿತ ಬರುತ್ತದೆ ಎಂಬ ವರದಿ ಸತ್ಯಕ್ಕೆ ದೂರವಾದದ್ದು, ಅಲ್ಲದೇ ಮಾಧ್ಯಮಗಳಿಗೆ ಯಾವುದೇ ಅಭಿಪ್ರಾಯ ವ್ಯಕ್ತಪಡಿಸಲು ಸ್ವಾತಂತ್ರ್ಯವಿದೆ, ಅದನ್ನು ನಾನು ತಡೆಯಲಾರೆ ಎಂದಿದ್ದಾರೆ.
ಪಾಕಿಸ್ತಾನದಲ್ಲಿ ಸುರಕ್ಷಿತ ದೃಷ್ಟಿಯಿಂದ ಮುತುವರ್ಜಿ ವಹಿಸಲಾಗುತ್ತಿದೆ ಎಂದು ಆರ್ಮಿ ವರಿಷ್ಠ ಜನರಲ್ ಅಶ್ಫಾಕ್ ಪರ್ವೆಜ್ ಕಯಾನಿ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ ತಾಲಿಬಾನ್ ಹಾಗೂ ಅಲ್ ಖಾಯಿದಾವನ್ನು ಮಟ್ಟಹಾಕುವಲ್ಲಿ ಪಾಕ್ ಸಂಪೂರ್ಣ ವಿಫಲವಾಗಿರುವುದು ದಿನನಿತ್ಯ ಪಾಕ್‌ನಲ್ಲಿ ನಡೆಯುತ್ತಿರುವ ಘಟನೆಯೇ ಸಾಕ್ಷಿಯಾಗಿದೆ, ಹಾಗಾದರೆ ಪಾಕಿಸ್ತಾನವನ್ನು ರಕ್ಷಿಸುವವರು ಯಾರು ಎಂಬುದಾಗಿ ಗಾರ್ಡಿಯನ್ ತನ್ನ ವರದಿಯಲ್ಲಿ ಪ್ರಶ್ನಿಸಿದೆ. |