ಶ್ರೀಲಂಕಾ ಕ್ರಿಕೆಟ್ ತಂಡದ ಮೇಲೆ ಮಂಗಳವಾರ ಭಯೋತ್ಪಾದಕರು ನಡೆಸಿದ ದಾಳಿಗೆ ಸಂಬಂಧಿಸಿದಂತೆ ಪಾಕಿಸ್ತಾನ 4ಮಂದಿ ಶಂಕಿತ ಉಗ್ರರ ರೇಖಾಚಿತ್ರವನ್ನು ಬುಧವಾರ ಬಿಡುಗಡೆಗೊಳಿಸಿದೆ.
ಶ್ರೀಲಂಕಾ ಕ್ರಿಕೆಟಿಗರ ಮೇಲೆ ಶೂಟೌಟ್ ಹಾಗೂ ಗ್ರೆನೇಡ್ ದಾಳಿ ನಡೆಸಿರುವ ನಾಲ್ಕು ಮಂದಿ ಯುವಕರ ( ಅಂದಾಜು 20ರಿಂದ 25ರ ಹರೆಯದ) ಸ್ಕೆಚ್ ಅನ್ನು ಬಿಡುಗಡೆ ಗೊಳಿಸಿದ್ದು, ಇದನ್ನು ಪ್ರತ್ಯಕ್ಷದರ್ಶಿ ಸಾಕ್ಷಿಯೊಬ್ಬರು ನೀಡಿದ ಮಾಹಿತಿಯನ್ವಯ ರೇಖಾಚಿತ್ರ ತಯಾರಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಈಗಾಗಲೇ 50ಮಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದು, ತೀವ್ರ ತನಿಖೆ ನಡೆಸಲಾಗುತ್ತಿದೆ. ಶಂಕಿತರನ್ನು ಲಾಹೋರ್ ಗುಲ್ಬರ್ಗ್ ಪ್ರದೇಶದಲ್ಲಿನ ಹಾಸ್ಟೆಲ್ ಹಾಗೂ ವಸತಿಗೃಹಗಳಿಂದ ವಿಶೇಷ ತನಿಖಾ ತಂಡ ವಶಕ್ಕೆ ತೆಗೆದುಕೊಂಡಿರುವುದಾಗಿ ಹೇಳಿದೆ.
ಗಢಾಫಿ ಸ್ಟೇಡಿಯಂನತ್ತ ಬಸ್‌ನಲ್ಲಿ ಆಗಮಿಸುತ್ತಿದ್ದ ಶ್ರೀಲಂಕಾ ತಂಡದ ಕ್ರಿಕೆಟಿಗರ ಮೇಲೆ ಲಿಬರ್ಟಿ ಚೌಕ್ ಸಮೀಪದಲ್ಲಿ ಶಸ್ತ್ರ ಸಜ್ಜಿತ ಉಗ್ರರು ಗುಂಡಿನ ಮಳೆಗರೆಯುತ್ತಿರುವ ವಿಡಿಯೋ ಚಿತ್ರಣವನ್ನು ಬುಧವಾರ ಬಿಡುಗಡೆ ಮಾಡಲಾಗಿತ್ತು. |