ಲಾಹೋರ್ ಗಢಾಫಿ ಸ್ಟೇಡಿಯಂನಲ್ಲಿ ಶ್ರೀಲಂಕಾ ಕ್ರಿಕೆಟಿಗರ ಮೇಲೆ ನಡೆದ ಭಯೋತ್ಪಾದನಾ ದಾಳಿಯ ಹಿಂದೆ ಭಾರತದ ಕೈವಾಡ ಇದೆ ಎಂಬ ಆರೋಪವನ್ನು ಪಾಕ್ ಆಂತರಿಕ ಸಚಿವ ರೆಹಮಾನ್ ಮಲಿಕ್ ಗುರುವಾರ ಸ್ಪಷ್ಟಪಡಿಸಿದ್ದಾರೆ.
ಈ ದಾಳಿಯ ಹಿಂದೆ ಅಲ್ ಖಾಯಿದಾದ ಸಂಚು ಇದ್ದು, ಶ್ರೀಲಂಕಾ ಕ್ರಿಕೆಟಿಗರ ಮೇಲೆ ದಾಳಿ ಮಾಡಿದ ಸಂಚುಕೋರರನ್ನು ತಾವು ಪತ್ತೆ ಹಚ್ಚಿರುವುದಾಗಿ ತಿಳಿಸಿದ್ದಾರೆ.
ಲಾಹೋರ್‌ನಲ್ಲಿ ಶ್ರೀಲಂಕಾ ಕ್ರಿಕೆಟಿಗರ ಮೇಲೆ ನಡೆದ ದಾಳಿಯ ಹಿಂದಿನ ವ್ಯಕ್ತಿಯ ಗುರುತು ಪತ್ತೆ ಹಚ್ಚಿರುವುದಾಗಿ ಪಾಕಿಸ್ತಾನ ಅಧಿಕಾರಿಗಳು ಗುರುವಾರ ತಿಳಿಸಿದ್ದು, ಆದರೆ ಯಾವುದೇ ಶಂಕಿತರ ಹೆಸರನ್ನು ಬಹಿರಂಗಪಡಿಸುವುದಿಲ್ಲ ಎಂದು ಪಂಜಾಬ್ ಪ್ರಾಂತ್ಯದ ರಾಜ್ಯಪಾಲ ಸಲ್ಮಾನ್ ತಾಸೀರ್ ಹೇಳಿದ್ದರು.
ಬಂಧಿತರ ಬಗ್ಗೆ ಮುಂದಿನ ಕೆಲವು ದಿನಗಳಲ್ಲಿ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳುವುದಾಗಿ ಅವರು ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡುತ್ತ ವಿವರಿಸಿದ್ದರು.
ದಾಳಿಕೋರರ ವಿವರದ ಮಾಹಿತಿಯನ್ನು ಬಹಿರಂಗಪಡಿಸುವುದಿಲ್ಲ ಎಂದು ತಿಳಿಸಿದ ತಾಹೀರ್, ತನಿಖೆಗಾಗಿ ನಿಯೋಜಿಸಿರುವ ಉನ್ನತ ಮಟ್ಟದ ಸಮಿತಿ ಇನ್ನು ಮೂರು ದಿನದೊಳಗೆ ವರದಿಯನ್ನು ಸಲ್ಲಿಸಲಿದೆ ಎಂದು ಹೇಳಿದರು.
ಅಲ್ಲದೇ ವಿಶೇಷ ತನಿಖಾ ತಂಡದ ಅಧಿಕಾರಿಗಳು ಐದು ಮಂದಿ ಶಂಕಿತರನ್ನು ತನಿಖೆಗೊಳಪಡಿಸಿದ್ದು, ದಾಳಿಯನ್ನು ಯಾವ ಉಗ್ರಗಾಮಿ ಸಂಘಟನೆಯ ನೆರವಿನಿಂದ ನಡೆಸಲಾಗಿದೆ ಎಂಬ ಬಗ್ಗೆ ವಿವರ ಕಲೆ ಹಾಕಲಾಗುತ್ತಿದೆ ಎಂದು ತಿಳಿಸಿದ್ದಾರೆ. |