ಲಾಹೋರ್‌ನಲ್ಲಿ ಶ್ರೀಲಂಕಾ ತಂಡದ ಮೇಲೆ ನಡೆದಿರುವ ಭಯೋತ್ಪಾದನಾ ದಾಳಿ ಇಡೀ ಪಾಕಿಸ್ತಾನಕ್ಕೆ ಅವಮಾನ ಎಂದು ಪಾಕ್ ಮಾಜಿ ಅಧ್ಯಕ್ಷ ಪರ್ವೇಜ್ ಮುಷರ್ರಪ್ ಕಿಡಿಕಾರಿದ್ದಾರೆ.
ಪಾಕಿಸ್ತಾನದ ನೆಲದಲ್ಲಿ ಮತ್ತೊಮ್ಮೆ ಉಗ್ರರು ನಡೆಸಿರುವ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ಅವರು, ಪಾಕ್‌ನ ಕ್ರಿಕೆಟ್ ಮತ್ತು ಕ್ರೀಡೆಗೆ ತುಂಬಾ ಕೆಟ್ಟದ್ದಾಗಿ ಪರಿಣಮಿಸಲಿದೆ ಎಂದು ನವದೆಹಲಿಗೆ ಆಗಮಿಸುವ ಮುನ್ನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.
ಶ್ರೀಲಂಕಾ ಕ್ರಿಕೆಟ್ ಆಟಗಾರರ ಮೇಲೆ ಶಸ್ತ್ರ ಸಜ್ಜಿತ 12ಮಂದಿ ಉಗ್ರರು ದಾಳಿ ನಡೆಸಿದ ಮೂರು ದಿನಗಳ ಬಳಿಕ ಮುಷರ್ರಫ್ ಈ ಪ್ರತಿಕ್ರಿಯೆ ನೀಡಿದ್ದಾರೆ.
ಈ ದಾಳಿ ಖಂಡನೀಯ ಎಂದು ಪುನರುಚ್ಚರಿಸಿರುವ ಅವರು, ಇಡೀ ಪಾಕಿಸ್ತಾನಕ್ಕೆ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದರು. ಭಯೋತ್ಪಾದಕರನ್ನು ಬಗ್ಗು ಬಡಿಯುವ ಇಚ್ಚೆ ಸರಕಾರಕ್ಕೆ ಇಲ್ಲ ಎಂದು ಆಡಳಿತಾರೂಢ ಪಿಪಿಪಿ ವಿರುದ್ಧ ಹರಿಹಾಯ್ದಿದ್ದಾರೆ.
ಶ್ರೀಲಂಕಾ ತಂಡದ ಮೇಲೆ ಉಗ್ರರು ದಾಳಿ ನಡೆಸಿದ ಸಂದರ್ಭದಲ್ಲಿ ಪಾಕ್ ಭದ್ರತಾ ಪಡೆಗಳು ಮೂಕಪ್ರೇಕ್ಷಕವಾಗಿದ್ದವು ಎಂದು ಗುರುವಾರ ಮುಷ್ ಗಂಭೀರವಾಗಿ ಆರೋಪಿಸಿದ್ದರು. |