ಹಿಂಸಾಜರ್ಜರಿತ ವಾಯುವ್ಯ ಪಾಕಿಸ್ತಾನದಲ್ಲಿ ನಡೆಸಲಾಗಿರುವ ಆತ್ಮಾಹುತಿ ದಾಳಿಯಲ್ಲಿ ಏಳು ಪೊಲೀಸರು ಸಾವನ್ನಪ್ಪಿದ್ದು ಇತರ ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಖೈಬರ್ ಬುಡಕಟ್ಟು ಪ್ರಾಂತ್ಯದಿಂದ ಪೇಶಾವರದತ್ತ ಸಾಗುತ್ತಿರುವ ವಾಹನಗಳನ್ನು ಪೊಲೀಸರು ತಪಾಸಿಸುತ್ತಿದ್ದ ವೇಳೆಗೆ ಈ ದಾಳಿ ನಡೆಸಲಾಗಿದೆ. ಈ ಪ್ರಾಂತೀಯ ರಾಜಧಾನಿಯು ಅಫ್ಘಾನ್ ಗಡಿಪ್ರದೇಶಕ್ಕೆ ಸನಿಹವಾಗಿದೆ.
ತಪಾಸಣೆಗಾಗಿ ನಡೆಸಲಾಗಿದ್ದ ರಸ್ತೆ ತಡೆಯು ಉಗ್ರರ ಗುರಿಯಾಗಿತ್ತೇ ಎಂಬುದು ಸ್ಪಷ್ಟವಾಗಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿ ಸಫಾವತ್ ಗಯೂರ್ ಹೇಳಿದ್ದಾರೆ. ದಾಳಿಕೋರನನ್ನು ಕರೆದೊಯ್ಯುತ್ತಿದ್ದ ಕಾರನ್ನು ನಿಲ್ಲಿಸುವಂತೆ ಸೂಚಿಸಿದ ವೇಳೆ ನಡೆಸಲಾಗಿರುವ ದಾಳಿಯ ವೇಳೆ ಹಲವಾರು ಅಧಿಕಾರಿಗಳೂ ಗಾಯಗೊಂಡಿದ್ದಾರೆ ಎಂದು ಗಯೂರ್ ತಿಳಿಸಿದ್ದಾರೆ.
ಅಲ್-ಖೈದಾ ಮತ್ತು ತಾಲಿಬಾನ್ ಉಗ್ರರು ವಾಯುವ್ಯಪಾಕಿಸ್ತಾನದಲ್ಲಿ ಹಲವಾರು ದಾಳಿಗಳನ್ನು ನಡೆಸುತ್ತಿದ್ದು, ಪೊಲೀಸರು ಅವರ ಪ್ರಮುಖ ಗುರಿಯಾಗಿದ್ದಾರೆ. ಅಲ್ಲದೆ ಇವರಲ್ಲಿ ಹಲವಾರು ಮಂದಿ ಅಫ್ಘಾನಿಸ್ತಾನದಲ್ಲಿರುವ ಅಮೆರಿಕ ಪಡೆಗಳ ಮೇಲೆ ನಡೆಸಿರುವ ದಾಳಿಯಲ್ಲಿ ಪಾಲ್ಗೊಂಡಿದ್ದಾರೆನ್ನಲಾಗಿದೆ. |