ಶ್ರೀಲಂಕಾ ಕ್ರಿಕೆಟ್ ತಂಡದ ಮೇಲೆ ದಾಳಿಯಲ್ಲಿ ಉಗ್ರಗಾಮಿ ಸಂಘಟನೆ ಲಷ್ಕರ್-ಇ-ತೊಯ್ಬಾ ಕೈವಾಡವಿದೆಯೆಂಬ ಮಾಧ್ಯಮ ವರದಿಗಳನ್ನು ಅದು ನಿರಾಕರಿಸಿದೆ. ಮಾಧ್ಯಮ ವರದಿಗಳು ನಿರಾಧಾರ, ಸುಳ್ಳು ಎಂದು ಲಷ್ಕರೆ ವಕ್ತಾರ ಅಬ್ದುಲ್ಲಾ ಗಝನಾವಿ ತಿಳಿಸಿದ್ದಾನೆ.
ಆತ ಅಜ್ಞಾತ ಸ್ಥಳವೊಂದರಿಂದ ದೂರವಾಣಿಯಲ್ಲಿ ಮಾತನಾಡುತ್ತಿದ್ದನು. ಮುಂಬೈ ದಾಳಿಗೆ ಕಾರಣಕರ್ತವಾದ ಎಲ್‌ಇಟಿ ಸೇರಿದಂತೆ ಸ್ವದೇಶಿ ಉಗ್ರಗಾಮಿಗಳ ಕೈವಾಡವಿರುವುದು ಆರಂಭಿಕ ತನಿಖೆಯಲ್ಲಿ ಪತ್ತೆಯಾಗಿರುವುದಾಗಿ ಪಾಕಿಸ್ತಾನದ ಸುದ್ದಿಪತ್ರಿಕೆಗಳು ಬಿತ್ತರಿಸಿದ್ದವು. ಆದರೆ ಮುಂಬೈ ದಾಳಿಯಲ್ಲಿ ಯಾವುದೇ ಪಾತ್ರವನ್ನು ನಿರಾಕರಿಸಿರುವ ಎಲ್‌ಇಟಿ, ಶ್ರೀಲಂಕಾ ತಂಡದ ಮೇಲೆ ದಾಳಿಯು ಪಾಕಿಸ್ತಾನದ ಸಾರ್ವಭೌಮತೆ ಮೇಲೆ ದಾಳಿಯಾಗಿದ್ದು, ಕಾಶ್ಮೀರಿ ಉಗ್ರಗಾಮಿಗಳು ಅಂತಹ ದಾಳಿಯ ಯೋಚನೆ ಕೂಡ ಮಾಡುವುದಿಲ್ಲ ಎಂದು ಗಝನಾವಿ ತಿಳಿಸಿದ್ದಾನೆ.
ಪಾಕಿಸ್ತಾನಕ್ಕೆ ಕಳಂಕ ತಟ್ಟಲು ಮತ್ತು ಅಸ್ಥಿರತೆ ಮೂಡಿಸಲು ಭಾರತೀಯ ಸಂಸ್ಥೆಗಳು ಹೂಡಿದ ಹುನ್ನಾರವಿದು ಎಂದು ಗಝನಾವಿ ಹೇಳಿದ್ದಾನೆ.
|