ಯೋಂಗ್ಯಾಂಗ್: ಶಾಂತಿಯುತ ಉದ್ದೇಶಕ್ಕೆ ಹಾರಿಸುವ ಉಪಗ್ರಹಕ್ಕೆ ಅಡ್ಡಿಪಡಿಸುವ ಯಾವುದೇ ಪ್ರಯತ್ನವು ಅಮೆರಿಕ, ದಕ್ಷಿಣ ಕೊರಿಯ ಮತ್ತು ಜಪಾನ್ ವಿರುದ್ಧ ಯುದ್ಧದಲ್ಲಿ ಪರ್ಯವಸಾನಗೊಳ್ಳುತ್ತದೆಂದು ಉತ್ತರಕೊರಿಯ ಸೋಮವಾರ ಎಚ್ಚರಿಕೆ ನೀಡಿದೆ.
'ನಮ್ಮ ಉಪಗ್ರಹ ಉಡಾವಣೆಯನ್ನು ತಡೆಯುವ ಯಾವುದೇ ಕ್ರಮದ ವಿರುದ್ಧ ನಾವು ಶಕ್ತಿಶಾಲಿ ಮಿಲಿಟರಿಯಿಂದ ಪ್ರತಿದಾಳಿ ನಡೆಸುತ್ತೇವೆ' ಎಂದು ಕೊರಿಯನ್ ಪೀಪಲ್ಸ್ ಸೇನೆಯ ವಕ್ತಾರರ ಹೇಳಿಕೆಯನ್ನು ಉಲ್ಲೇಖಿಸಿ ಅಧಿಕೃತ ಕೊರಿಯ ಸೆಂಟ್ರಲ್ ನ್ಯೂಸ್ ಏಜನ್ಸಿ ತಿಳಿಸಿದೆ.
ಅಮೆರಿಕ ಮತ್ತು ದಕ್ಷಿಣ ಕೊರಿಯ ಸುಮಾರು 12 ದಿನಗಳವರೆಗೆ ನಿರೀಕ್ಷಿಸಲಾಗಿರುವ ಜಂಟಿ ಮಿಲಿಟರಿ ಚಟುವಟಿಕೆಯನ್ನು ಆರಂಭಿಸಿದ ಬಳಿಕ ಉತ್ತರಕೊರಿಯದಿಂದ ಎಚ್ಚರಿಕೆ ಹೊರಬಿದ್ದಿದೆ. ಅಮೆರಿಕದ ಕೈಬೊಂಬೆಗಳಾಗಿರುವ ದಕ್ಷಿಣ ಕೊರಿಯ ಮತ್ತು ಜಪಾನ್ ತಮ್ಮ ರಾಷ್ಟ್ರದ ಉಪಗ್ರಹವನ್ನು ತಡೆಯಲು ಪಿತೂರಿಗಳನ್ನು ಯೋಜಿಸಿದ್ದು, ದಕ್ಷಿಣ ಕೊರಿಯ ಮತ್ತು ಜಪಾನ್ ವಿರುದ್ಧ ಸಂಘರ್ಷದ ಹಾದಿ ಹಿಡಿಯುವುದಾಗಿ ವಕ್ತಾರಪು ತಮ್ಮ ಮೂರಂಶಗಳ ಹೇಳಿಕೆಯಲ್ಲಿ ಪುನರುಚ್ಚರಿಸಿದ್ದಾರೆ.
ಉತ್ತರಕೊರಿಯ ಇತ್ತೀಚೆಗೆ ಶಾಂತಿಯುತ ಉದ್ದೇಶಕ್ಕೆ ಸಂಪರ್ಕ ಉಪಗ್ರಹವನ್ನು ಉಡಾಯಿಸುವ ಸುಧಾರಿತ ಹಂತದಲ್ಲಿರುವುದಾಗಿ ಪ್ರಕಟಿಸಿದೆ. ಆದರೆ ಖಂಡಾಂತರ ಕ್ಷಿಪಣಿ ಟೈಪೊಡಾಂಗ್-2 ಪರೀಕ್ಷಾರ್ಥ ಪ್ರಯೋಗವನ್ನು ಮುಚ್ಚಿಹಾಕಲು ಉತ್ತರ ಕೊರಿಯ ಉಪಗ್ರಹವನ್ನು ಹಾರಿಸುತ್ತಿದೆಯೆಂದು ಅಮೆರಿಕ ಮತ್ತು ದಕ್ಷಿಣ ಕೊರಿಯ ಹೇಳುತ್ತಿದೆ.
ಕ್ಷಿಪಣಿಯು ಅಂದಾಜು 6,700 ಕಿಮೀ ವ್ಯಾಪ್ತಿಯನ್ನು ಹೊಂದಿದ್ದು, ಅಣ್ವಸ್ತ್ರ ಸಿಡಿತಲೆ ಒಯ್ಯುವುದಕ್ಕೆ ವಿನ್ಯಾಸಗೊಳಿಸಲಾಗಿದ್ದು, ಅಮೆರಿಕ ಪ್ರದೇಶದ ಗುರಿಗಳಿಗೆ ದಾಳಿ ಮಾಡುವ ಸಾಮರ್ಥ್ಯ ಹೊಂದಿದೆ. |