ಅರೆಮಿಲಿಟರಿ ಬಿಡಿಆರ್ ಮುಖ್ಯಕೇಂದ್ರದಲ್ಲಿ 73 ಸೇನಾಧಿಕಾರಿಗಳ ಹತ್ಯಾಕಾಂಡ ಕುರಿತ ತನಿಖೆಗೆ ನೆರವಾಗಲು ಎಫ್‌ಬಿಐನ ಅಮೆರಿಕ ತಂಡದ ಇಬ್ಬರು ಸದಸ್ಯರು ಇಲ್ಲಿಗೆ ಆಗಮಿಸಿದ್ದಾರೆ. ಇಬ್ಬರು ಸದಸ್ಯರ ತಂಡವು ಆರಂಭಿಕ ಸಮೀಕ್ಷೆಯನ್ನು ನಡೆಸಿ ಅವರ ವರದಿಯ ಅನುಸಾರ ಎಫ್‌ಬಿಐ ತನಿಖೆಗೆ ಅಗತ್ಯವಾದ ನೆರವು ನೀಡುವುದು ಎಂದು ಢಾಕಾದಲ್ಲಿರುವ ಅಮೆರಿಕದ ಪ್ರತಿನಿಧಿ ಜೇಮ್ಸ್ ಮೋರಿಯಾರ್ಟಿ ವರದಿಗಾರರಿಗೆ ತಿಳಿಸಿದರು.
ಇಬ್ಬರು ಸದಸ್ಯರ ತಂಡವು ಸುಧಾರಿತ ತಂಡವಾಗಿದೆ ಎಂದು ಬಾಂಗ್ಲಾದೇಶ ವಿದೇಶಾಂಗ ಖಾತೆಯ ಅಧಿಕಾರಿಗಳು ತಿಳಿಸಿದ್ದಾರೆ. ಸಾಗರೋತ್ತರ ತನಿಖಾ ವಿಧಾನಗಳ ನಿಗದಿಗೆ ಅವರು ಕಾನೂನು ತಜ್ಞತೆ ಹೊಂದಿದ್ದಾರೆಂದು ಅಮೆರಿಕ ರಾಯಭಾರಿ ಮೂಲಗಳು ತಿಳಿಸಿವೆ. ವಿದೇಶಾಂಗ ಸಚಿವ ದೀಪು ಮೋನಿ ಭಾನುವಾರ ಎಫ್‌ಬಿಐ ಸದಸ್ಯರ ಆಗಮನವನ್ನು ದೃಢಪಡಿಸಿದ್ದು, ಅತಿ ಶೀಘ್ರದಲ್ಲೇ ಸ್ಕಾಟ್‌ಲ್ಯಾಂಡ್ ಯಾರ್ಡ್ ತಂಡವನ್ನು ಕೂಡ ಬಾಂಗ್ಲಾಗೆ ನಿರೀಕ್ಷಿಸಲಾಗಿದೆಯೆಂದು ಹೇಳಿದ್ದಾರೆ.
ಬಿಡಿಆರ್ ದಂಗೆಯಲ್ಲಿ ಮೃತಪಟ್ಟ ಸೇನಾಧಿಕಾರಿಗಳ ಕಾಣೆಯಾದ ಶವಗಳನ್ನು ಪತ್ತೆಹಚ್ಚಲು ಎಫ್‌ಬಿಐ ವಿಧಿವಿಜ್ಞಾನ ತಜ್ಞತೆಯನ್ನು ಕೂಡ ಒದಗಿಸುವುದು ಎಂದು ವಿದೇಶಾಂಗ ಸಚಿವ ಮೋನಿ ಹೇಳಿದರು. ಢಾಕಾದಲ್ಲಿ ಭುಗಿಲೆದ್ದ ಬಂಡಾಯದ ತನಿಖೆಗೆ ವಿಶ್ವಸಂಸ್ಥೆಯ ನೆರವನ್ನು ಕೂಡ ಢಾಕಾ ಕೋರಿದ್ದು, ನ್ಯೂಯಾರ್ಕ್ ಕಾಯಂ ರಾಯಭಾರಕಚೇರಿಯ ಮೂಲಕ ಈ ಮನವಿ ಸಲ್ಲಿಸಲಾಗಿದೆ. ಬಿಡಿಆರ್ ಮುಖ್ಯಕೇಂದ್ರದಲ್ಲಿ ಸೇನಾಧಿಕಾರಿಗಳ ಕಗ್ಗೊಲೆ ಮಾಡಿದ ಸಂಚುಕೋರರ ಗುರಿ ಅರಾಜಕತೆ ಸೃಷ್ಟಿಸಿ ಆಂತರ್ಯುದ್ಧದ ಸುಳಿಗೆ ರಾಷ್ಟ್ರವನ್ನು ತಳ್ಳುವುದಾಗಿದೆ ಎಂದು ಪ್ರಧಾನ ಮಂತ್ರಿ ಹಸೀನಾ ಪಕ್ಷದ ಸಭೆಯಲ್ಲಿ ತಿಳಿಸಿದ್ದಾರೆ. ದಂಗೆಯ ಸೂತ್ರಧಾರರು ಆಂತರ್ಯುದ್ಧ ಭುಗಿಲೇಳಲು ಯತ್ನ ಮುಂದುವರಿಸಿದ್ದಾರೆಂದು ಅವರು ಹೇಳಿದರು.
|