ರಾಷ್ಟ್ರದಲ್ಲಿ ಕಾನೂನು ಸುವ್ಯವಸ್ಥೆ ಮರುಸ್ಥಾಪನೆ ಮಾಡುವಂತೆ ಸೇನಾ ಮುಖ್ಯಸ್ಥ ಜನರಲ್ ಅಸ್ಫಾಖ್ ಪರ್ವೇಜ್ ಕಯಾನಿ ಅವರು ಪಾಕಿಸ್ತಾನದ ಅಧ್ಯಕ್ಷ ಅಸೀಫ್ ಅಲಿ ಜರ್ದಾರಿಗೆ ಎಚ್ಚರಿಸಿದ್ದಾರೆಂದು ವರದಿಯಾಗಿದ್ದು, ಪಾಕಿಸ್ತಾನದಲ್ಲಿ ಇನ್ನೊಂದು ಕ್ಷಿಪ್ರಕ್ರಾಂತಿಯ ಕರಾಳ ಛಾಯೆ ಆವರಿಸಿದೆ.
ದೇಶದಲ್ಲಿ ಆಡಳಿತವನ್ನು ಪುನಃ ಹಳಿಯ ಮೇಲೆ ತರಲು ಕಯಾನಿ ಮಾ.16ರ ಗಡುವನ್ನು ಜರ್ದಾರಿಗೆ ನೀಡಿದ್ದಾರೆಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡುತ್ತಿವೆ. ವಿಶೇಷವಾಗಿ ಸರ್ಕಾರ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ತಾಲಿಬಾನ್ ಷರಿಯತ್ ಕಾನೂನು ಜಾರಿಗೆ ತಂದಿರುವ ಸ್ವಾತ್ ಕಣಿವೆ ಸೇರಿದಂತೆ ವಾಯವ್ಯ ಗಡಿ ಪ್ರಾಂತ್ಯದ ಅನೇಕ ಕಡೆ ಕಾನೂನುಸುವ್ಯವಸ್ಥೆ ಮರುಸ್ಥಾಪನೆಗೆ ಕಯಾನಿ ಒತ್ತಾಯಿಸಿದ್ದಾರೆ.
ಜರ್ದಾರಿ ಧೋರಣೆಯಿಂದ ಬೇಸತ್ತಿದೆಯೆಂದು ನಂಬಲಾಗಿರುವ ಅಮೆರಿಕದ ಕುಮ್ಮಕ್ಕಿನಿಂದ ಕಯಾನಿ ಅವರು ಜರ್ದಾರಿಗೆ ಎಚ್ಚರಿಕೆ ನೀಡುವ ಬೆಳವಣಿಗೆ ಉಂಟಾಗಿದೆಯೆಂದು ವರದಿಗಳು ಹೇಳಿವೆ. ಮಾಜಿ ಪ್ರಧಾನಮಂತ್ರಿ ನವಾಜ್ ಷರೀಫ್ ವಿರುದ್ಧ ವೈಯಕ್ತಿಕ ದ್ವೇಷ ತೀರಿಸಿಕೊಳ್ಳಲು ಜರ್ದಾರಿ ಕಾಲಯಾಪನೆ ಮಾಡುತ್ತಿದ್ದಾರೆಂದು ಅಮೆರಿಕ ಆಡಳಿತ ಅಭಿಪ್ರಾಯಪಟ್ಟಿದೆ. ಸರ್ಕಾರದ ವಿರುದ್ಧ ಪ್ರತಿಪಕ್ಷವು ಮಾ.16ರಂದು ರಾಜಧಾನಿಯಲ್ಲಿ ಭಾರೀ ಮೆರವಣಿಗೆ ನಡೆಸಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಅಂದೇ ಕಯಾನಿ ನೀಡಿರುವ ಗಡುವು ಮಹತ್ವಪಡೆದಿದೆ. ಲಾಹೋರ್‌ನಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡದ ಮೇಲೆ ದಾಳಿ ನಡೆದ ಕೆಲವೇ ದಿನಗಳಲ್ಲಿ ಕಯಾನಿಯಿಂದ ಎಚ್ಚರಿಕೆ ಹೊರಬಿದ್ದಿದೆ. ಏತನ್ಮಧ್ಯೆ, ಲಾಹೋರ್ ದಾಳಿ ಘಟನೆ ಹಿಂದೆ ನಾಗರಿಕ ಸರ್ಕಾರವನ್ನು ಅಸ್ಥಿರಗೊಳಿಸುವ ಪಾಕಿಸ್ತಾನ ಮಿಲಿಟರಿ ಶಕ್ತಿಗಳ ಕೈವಾಡವಿದೆ ಎಂಬ ಊಹಾಪೋಹಗಳು ದಟ್ಟವಾಗಿ ಹರಡಿವೆ. |