ವಿಶ್ವಾದ್ಯಂತ ಆಹಾರಪದಾರ್ಥಗಳ ಬೆಲೆ ಇಳಿಮುಖದಲ್ಲಿದ್ದರೂ ಬಡವರಿಗೆ ಹೆಚ್ಚು ಆಹಾರ ಲಭ್ಯವಾಗುತ್ತಿಲ್ಲ ಎಂದು ವಿಶ್ವಸಂಸ್ಥೆಯ ಉನ್ನತಾಧಿಕಾರಿ ನವಿ ಪಿಳ್ಳೈ ತಿಳಿಸಿದರು. ಜಾಗತಿಕ ಹಸಿವಿನ ವಿರುದ್ಧ ಹೋರಾಡಲು ಉತ್ತಮ ಉತ್ತರದಾಯಿತ್ವದೊಂದಿಗೆ ದೃಢ ಹೆಜ್ಜೆಗಳನ್ನು ಇರಿಸುವ ಅಗತ್ಯವನ್ನು ಅವರು ಪ್ರತಿಪಾದಿಸಿದರು.
ಸಮಾಜದ ಕಡೆಗಣಿತ ವರ್ಗಗಳಿಗೆ ನೆರವು ನೀಡಲು ಕಾರ್ಯನಿರ್ವಹಿಸುವಂತೆ ಮಾನವ ಹಕ್ಕುಗಳ ಹೈಕಮೀಷನರ್ ನವಿ ಪಿಳ್ಳೈ ಜಿನೀವಾ ಮೂಲದ ಮಾನವ ಹಕ್ಕು ಮಂಡಳಿಗೆ ತಿಳಿಸಿದ್ದಾರೆ. ಹಸಿವನ್ನು ಸೋಲಿಸಲು ಯಾವುದೇ ಯಶಸ್ವಿ ಕಾರ್ಯತಂತ್ರವು ಉತ್ತಮ ಉತ್ತರದಾಯಿತ್ವದೊಂದಿಗೆ ಬಲವಾದ ಸಂಸ್ಥೆಗಳು, ಕೃಷಿ ಉತ್ಪಾದನೆ ಮತ್ತು ಸಂಶೋಧನೆಯಲ್ಲಿ ಸುಸ್ಥಿರ ಬಂಡವಾಳಗಳು ಮತ್ತು ಸಣ್ಣಪ್ರಮಾಣದ ರೈತರು ಮತ್ತು ಬಡವರಿಗೆ ನೆರವು ಒಳಗೊಂಡಿರಬೇಕು ಎಂದು ಪಿಳ್ಳೈ ಪ್ರತಿಪಾದಿಸಿದರು.
ಕಳೆದ ವರ್ಷ ಆಹಾರ ಪದಾರ್ಥಗಳ ಬೆಲೆಯಲ್ಲಿ ತೀವ್ರ ಏರಿಕೆಯಿಂದಾಗಿ ವಿಶ್ವದಲ್ಲಿ ಹಸಿವಿನಿಂದ ಕೂಡಿದವರ ಸಂಖ್ಯೆ 854 ಮಿಲಿಯದಿಂದ 967 ಮಿಲಿಯಕ್ಕೆ ಏರಿತು. ಆದರೆ ಬಳಿಕ ಆಹಾರಪದಾರ್ಥಗಳ ಬೆಲೆ ಇಳಿಮುಖವಾದರೂ 2002ಕ್ಕಿಂತ ಹೆಚ್ಚಿನ ಮಟ್ಟದಲ್ಲೇ ಉಳಿದು ಬಡವರು ಆಹಾರಪದಾರ್ಥ ಖರೀದಿಯಲ್ಲಿ ಇನ್ನೂ ಅಸಮರ್ಥರಾಗಿದ್ದಾರೆಂದು ಅವರು ಗಮನಸೆಳೆದರು.
ಹಸಿವು ನಿವಾರಣೆಗೆ ಕ್ರಮಗಳು ಮತ್ತು ಆಹಾರ ಹಕ್ಕಿಗೆ ಉತ್ತೇಜನವನ್ನು ದೃಢ ಕ್ರಮವಾಗಿ ಪರಿವರ್ತಿಸಿ ಬಿಕ್ಕಟ್ಟಿಗೆ ಗುರಿಯಾಗಿರುವವರಿಗೆ ನೆರವು ನೀಡಬೇಕು ಎಂದು ಕಮೀಷನರ್ 47 ಸದಸ್ಯಬಲದ ಮಂಡಳಿಗೆ ತಿಳಿಸಿದರು. ಗ್ರಾಮೀಣ ಮತ್ತು ನಗರದ ಬಡವರು, ಭೂರಹಿತರು, ಸಣ್ಣಹಿಡುವಳಿ ರೈತರು ಮತ್ತು ಮಹಿಳೆಯರ ನೇತೃತ್ವದ ಕುಟುಂಬಗಳ ಬಗ್ಗೆ ಅವರು ವಿಶೇಷವಾಗಿ ಕಳವಳ ವ್ಯಕ್ತಪಡಿಸಿದರು.
|