ಪಾಕಿಸ್ತಾನದಲ್ಲಿ ಸ್ಫೋಟನಾಕಾರಿ ಪರಿಸ್ಥಿತಿ ಉಂಟಾಗಿರುವ ನಡುವೆ, ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ತಾವು ಅಧ್ಯಕ್ಷ ಹುದ್ದೆಯಲ್ಲಿ ಉಪಯುಕ್ತ ಪಾತ್ರವಹಿಸುವುದು ಸಾಧ್ಯವಾದರೆ ಪುನಃ ಅಧ್ಯಕ್ಷರಾಗಲು ಪರಿಶೀಲನೆ ನಡೆಸುವುದಾಗಿ ಹೇಳಿದ್ದಾರೆ. ಪಾಕಿಸ್ತಾನದ ಬುಡಕಟ್ಟು ವಲಯದಲ್ಲಿ ಅಮೆರಿಕದ ಡ್ರೋನ್ ದಾಳಿಗಳನ್ನು ಮುಷರಫ್ ವಿರೋಧಿಸಿದರು.ಆದರೆ ಅದೇ ಗಳಿಗೆಯಲ್ಲಿ ಆಫ್ಘಾನಿಸ್ತಾನದ ಗಡಿಯಲ್ಲಿ ಬೀಡುಬಿಟ್ಟಿರುವ ವಿದೇಶಿ ಉಗ್ರರ ಮೂಲೋತ್ಪಾಟನೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ನುಡಿದರು. ತಮಗೆ ಅಧ್ಯಕ್ಷ ಹುದ್ದೆಯನ್ನು ಪುನಃ ನೀಡುವುದಾದರೆ ಹಾಗೂ ಉಪಯುಕ್ತ ಪಾತ್ರ ವಹಿಸಲು ಸಾಧ್ಯವಾದರೆ ಈ ರಾಷ್ಟ್ರಕ್ಕೆ ಸೇವೆ ಸಲ್ಲಿಸಲು ಬಯಸುವುದಾಗಿ ಅವರು ಹೇಳಿದರು. ಭಾರತಕ್ಕೆ ನಾಲ್ಕು ದಿನಗಳ ಭೇಟಿ ಬಳಿಕ ಹಿಂತಿರುಗಿದ ಮುಷರಫ್ ಕರಾಚಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಆದರೆ ನಿರುಪಯೋಗಿ ಅಧ್ಯಕ್ಷರಾಗಲು ತಾವು ಬಯಸುವುದಿಲ್ಲ ಎಂದೂ ಅವರು ಅದೇ ಸಂದರ್ಭದಲ್ಲಿ ಹೇಳಿದರು. ಯಾವುದೇ ರಾಜಕೀಯ ಪಕ್ಷಕ್ಕೆ ಸೇರ್ಪಡೆಯಾಗುವ ಯೋಜನೆಯಿಲ್ಲವೆಂದು ಮುಷರಫ್ ಹೇಳಿದರು. ತಾವು ಯಾವುದೇ ರಾಜಕೀಯ ಪಕ್ಷಕ್ಕೆ ಸೇರುವುದಿಲ್ಲ. ಪ್ರಸಕ್ತ ಪರಿಸರದಲ್ಲಿ , ರಾಜಕೀಯಕ್ಕೆ ಸೇರುವ ಯಾವುದೇ ಯೋಜನೆಯಿಲ್ಲ. ಪ್ರಾಮಾಣಿಕವಾಗಿ ತಾವು ರಾಜಕೀಯಕ್ಕೆ ಸೇರುವ ಬಗ್ಗೆ ಗಂಭೀರ ಚಿಂತನೆ ನಡೆಸಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಮುಷರಫ್ ಹೇಳಿದರು. ಪಾಕಿಸ್ತಾನದ ಜನತೆ ಸೇನೆ ಮತ್ತು ಐಎಸ್ಐಗೆ ಒತ್ತಾಸೆಯಾಗಿ ನಿಲ್ಲಬೇಕು ಎಂದು ಹೇಳಿದರು. ಮಾ.16ರೊಳಗೆ ರಾಷ್ಟ್ರದಲ್ಲಿ ಸುಸ್ಥಿತಿ ಮೂಡಿಸುವಂತೆ ಜನರಲ್ ಕಯಾನಿ ಅಧ್ಯಕ್ಷ ಜರ್ದಾರಿಗೆ ನೀಡಿದ ಆದೇಶ ಕುರಿತು, ಆಂತರಿಕವಾಗಿ ಮತ್ತು ಬಾಹ್ಯ ಬೆದರಿಕೆಯಿಂದ ರಾಷ್ಟ್ರವನ್ನು ರಕ್ಷಿಸುವುದು ಸೇನೆಯ ಜವಾಬ್ದಾರಿ ಎಂದು ಮುಷರಫ್ ಹೇಳುವ ಮೂಲಕ ಮಿಲಿಟರಿಗೆ ಒತ್ತಾಸೆಯಾಗಿ ನಿಂತರು. |