ಶ್ರೀಲಂಕಾ ಸೇನೆಯ ದಾಳಿಗೆ ಪ್ರತಿದಾಳಿ ನಡೆಸುತ್ತಿರುವ ಕನಿಷ್ಠ 150 ತಮಿಳು ವ್ಯಾಘ್ರ ಹೋರಾಟಗಾರರನ್ನು ಶ್ರೀಲಂಕಾ ಸೇನೆ ಹತ್ಯೆಮಾಡಿದೆ. ಸಣ್ಣ ಯುದ್ಧವಲಯದಿಂದ ತಮಿಳು ನಿರಾಶ್ರಿತರ ಪಲಾಯನ ವೇಗದಗತಿ ಪಡೆದುಕೊಂಡಿದೆ ಎಂದು ಮಿಲಿಟರಿ ಸೋಮವಾರ ತಿಳಿಸಿದೆ. ಮುಲ್ಲೈತಿವು ಜಿಲ್ಲೆಯಲ್ಲಿ ಸಂಭವಿಸಿದ ವಾರಾಂತ್ಯ ಘರ್ಷಣೆಯಲ್ಲಿ ಸುಮಾರು 150 ಎಲ್ಟಿಟಿಇ ಕಾರ್ಯಕರ್ತರು ಹತರಾಗಿದ್ದಾರೆಂದು ಹಿರಿಯ ರಕ್ಷಣಾ ಸಚಿವಾಲಯದ ಅಧಿಕಾರಿ ತಿಳಿಸಿದರು.
ಈ ಘರ್ಷಣೆಗಳಲ್ಲಿ 80 ವ್ಯಾಘ್ರ ಬಂಡುಕೋರರ ದೇಹಗಳನ್ನು ಪತ್ತೆಹಚ್ಚಲಾಗಿದೆ ಎಂದು ರಕ್ಷಣಾ ಅಧಿಕಾರಿ ತಿಳಿಸಿದರು. ಚಲೈ, ಪಟ್ಟಿಕಿರೈ ಮತ್ತು ಪುತ್ತುಕುಡಿರಿಪ್ಪುನಲ್ಲಿ ಬಂಡುಕೋರರ ತೀವ್ರ ಪ್ರತಿರೋಧದ ನಡುವೆ ಸಾವುನೋವು ಉಂಟಾಗಿದೆ.ಬಂಡುಕೋರರು 50 ಕಿಮೀ ಸುತ್ತಳತೆಯಲ್ಲಿ ಸೀಮಿತಗೊಂಡಿದ್ದು, ಮುನ್ನುಗ್ಗುತ್ತಿರುವ ಶ್ರೀಲಂಕಾ ಸೇನೆಯನ್ನು ಪ್ರತಿರೋಧಿಸಲು ಹತಾಶ ಪ್ರಯತ್ನ ನಡೆಸಿದ್ದಾರೆಂದು ತಿಳಿದುಬಂದಿದೆ.
ಪುತ್ತುಕುಡಿರುಪ್ಪು ಪ್ರದೇಶದಲ್ಲಿ ತರುವಾಯದ ಶೋಧ ಕಾರ್ಯಾಚರಣೆಯಲ್ಲಿ , ಪಡೆಗಳು ಭಾರೀ ಪ್ರಮಾಣದ ಯುದ್ಧ ಸಾಮಗ್ರಿಗಳನ್ನು ಪತ್ತೆಹಚ್ಚಿದೆ ಎಂದು ರಾಷ್ಟ್ರೀಯ ಭದ್ರತೆಯ ಮಾಧ್ಯಮ ಕೇಂದ್ರ ತಿಳಿಸಿದೆ.ಏತನ್ಮಧ್ಯೆ, ಶಂಕಿತ ಎಲ್ಟಿಟಿಇ ಬಂಡುಕೋರರು 500 ಮೆಟ್ರಿಕ್ ಟನ್ ಆಹಾರಪದಾರ್ಥ ಸಾಗಿಸುತ್ತಿದ್ದ ಸರ್ಕಾರಿ ಹಡಗೊಂದರ ಮೇಲೆ ಭಾರೀ ಫಿರಂಗಿ ದಾಳಿ ನಡೆಸಿತೆಂದು ವರದಿಯಾಗಿದೆ.
ಎಂ.ವಿ. ಬಿಂಟಾನ್ ಹೆಸರಿನ ಹಡಗು ಟ್ರಿಂಕಾಮಲಿಯಿಂದ ಮುಲ್ಲೈತಿವುನ ಪುಟುಮಾಲನ್ಗೆ ಸರಕುಸಾಗಣೆ ಮಾಡುವಾಗ ಶಂಕಿತ ಬಂಡುಕೋರರು ಶೆಲ್ ದಾಳಿ ನಡೆಸಿದರೆಂದು ಸೇನೆ ಹೇಳಿದೆ. ಶ್ರೀಲಂಕಾದ ಉತ್ತರದಲ್ಲಿ ಸೈನಿಕರು ಮತ್ತು ಎಲ್ಟಿಟಿಇ ನಡುವೆ ಸಮರ ಭುಗಿಲೆದ್ದ ಬಳಿಕ, ಸಮರದಲ್ಲಿ ಸಿಕ್ಕಿಬಿದ್ದ ಆಂತರಿಕ ನಿರಾಶ್ರಿತ ಜನರಿಗೆ ಆಹಾರ ಪದಾರ್ಥ ಪೂರೈಸುವ ಸಲುವಾಗಿ ಟ್ರಿಂಕಾಮಲಿಯಿಂದ ಹಡಗು ಹೊರಟಿತ್ತು.
ಪುಟುಮಾಲನ್ ಬಳಿ 142 ಮೆಟ್ರಿಕ್ ಟನ್ ಆಹಾರ ಧಾನ್ಯ ಇಳಿಸಿದ ಕೂಡ ದಾಳಿ ನಡೆಯಿತೆಂದು ವರದಿಯಾಗಿದೆ.
|