ಮಧ್ಯ ಜಪಾನ್‌ನ ದ್ವೀಪವೊಂದರಲ್ಲಿ ಎರಡು ಸರಕುಸಾಗಣೆ ಹಡಗುಗಳು ಮುಖಾಮುಖಿ ಡಿಕ್ಕಿಯಾಗಿದ್ದು, ವ್ಯಾಪಕ ಶೋಧ ಕಾರ್ಯಾಚರಣೆ ಕೈಗೊಳ್ಳಲಾಗಿದೆ. 17 ಸಿಬ್ಬಂದಿಯಿದ್ದ ದಕ್ಷಿಣ ಕೊರಿಯದ ನೌಕೆ ಈ ದುರ್ಘಟನೆಯಲ್ಲಿ ನಾಪತ್ತೆಯಾಗಿದ್ದು, ನೀರುಪಾಲಾಗಿದೆಯೆಂದು ಶಂಕಿಸಲಾಗಿದೆ.
ಪನಾಮಾ ನೊಂದಾಯಿತ ಸರಕುಸಾಗಣೆಯ ಇನ್ನೊಂದು ಹಡಗಿಗೆ ಹಾನಿಯಾಗಿದ್ದು, ಅದರ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ. ಶೋಧ ಕಾರ್ಯದಲ್ಲಿ ಜಪಾನ್ ಕರಾವಳಿ ಪಡೆಯ 6 ಗಸ್ತುನೌಕೆಗಳು ಮತ್ತು ಮೂರು ಹೆಲಿಕಾಪ್ಟರ್‌ಗಳು ಒಳಗೊಂಡಿವೆ.
ಟೋಕಿಯೊ ದಕ್ಷಿಣಕ್ಕೆ 120 ಕಿಮೀ ದೂರದ ಇಝು ಒಷಿಮಾ ದ್ವೀಪದಲ್ಲಿ ಈ ಡಿಕ್ಕಿ ಸಂಭವಿಸಿದೆಯೆಂದು ತಿಳಿದುಬಂದಿದೆ. ಡಿಕ್ಕಿಯಾದ ಜಲಪ್ರದೇಶದಲ್ಲಿ ಮರದ ತೆಪ್ಪವೊಂದು ಪತ್ತೆಯಾಗಿದ್ದು, ಕೆಲವು ಜೀವರಕ್ಷಕ ಕವಚಗಳು ನೀರಿನ ಮೇಲ್ಮೈನಲ್ಲಿದ್ದವು. ಆದರೆ ಹಡಗಿನ ಭಾಗಗಳನ್ನು ನಾವು ಪತ್ತೆಮಾಡಬೇಕಾಗಿದೆ ಎಂದುಕರಾವಳಿ ಕಾವಲು ಪಡೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ದಕ್ಷಿಣ ಕೊರಿಯ ನೊಂದಾಯಿತ ಆರ್ಚಿಡ್ ಪಿಯಾ ನೌಕೆಯಲ್ಲಿದ್ದ 7 ಮಂದಿ ದಕ್ಷಿಣ ಕೊರಿಯನ್ನರು ಮತ್ತು 9 ಇಂಡೋನೇಶಿಯ ಪೌರರು ನಾಪತ್ತೆಯಾಗಿರುವ ಸಿಬ್ಬಂದಿ. ಪ್ರಕ್ಷುಬ್ಧ ಸಮುದ್ರದಲ್ಲಿ ಮಂಗಳವಾರ ಮುಂಜಾನೆ ಮಳೆಯಿಂದಾಗಿ ಕಳಪೆ ದೃಷ್ಟಿಗೋಚರತೆಯಿಂದ ಪನಾಮಾ ನೊಂದಾಯಿತ ಸೈಗ್ನಸ್ ಏಸ್ ಹಡಗಿಗೆ ಡಿಕ್ಕಿ ಹೊಡೆಯಿತೆಂದು ತಿಳಿದುಬಂದಿದೆ.
ಟೆಲಿವಿಷನ್ ಚಿತ್ರದಲ್ಲಿ ಜಲಪ್ರದೇಶದಲ್ಲಿ ವ್ಯಾಪಕ ತೈಲ ಸೋರಿಕೆಯಾಗಿದ್ದನ್ನು ತೋರಿಸಿದೆ. ದಕ್ಷಿಣ ಕೊರಿಯ ಹಡಗು ದಕ್ಷಿಣ ಕೊರಿಯಕ್ಕೆ ಉಕ್ಕಿನ ಭಾಗಗಳನ್ನು ಸಾಗಣೆ ಮಾಡುತ್ತಿತ್ತು ಮತ್ತು ಪನಾಮಾ ಹಡಗು ವಾಹನಗಳನ್ನು ಸಾಗಣೆ ಮಾಡುತ್ತಿದ್ದಾಗ ಈ ಮುಖಾಮುಖಿ ಡಿಕ್ಕಿ ಸಂಭವಿಸಿದೆ. |