ಮಾಜಿ ಪ್ರಧಾನಮಂತ್ರಿ ನವಾಜ್ ಷರೀಫ್ ಬೆಂಬಲಿಗರು ಹಿಂಸಾಚಾರಕ್ಕಿಳಿದರೆ ಷರೀಫ್ ವಿರುದ್ಧ ರಾಜದ್ರೋಹದ ಆರೋಪ ಹೊರಿಸಲಾಗುವುದು ಎಂದು ಪಾಕಿಸ್ತಾನ ಸರ್ಕಾರ ಎಚ್ಚರಿಸಿದೆ. ಷರೀಫ್ ಅವರು ಚುನಾವಣೆಗೆ ನಿಲ್ಲುವುದರ ವಿರುದ್ಧ ಸುಪ್ರೀಂಕೋರ್ಟ್ ನಿಷೇಧ ವಿಧಿಸಿದ ಬಳಿಕ ಇಸ್ಲಾಮಾಬಾದ್‌ಗೆ ಪ್ರತಿಭಟನಾಕಾರರು ಭಾರೀ ಮೆರವಣಿಗೆ ಯೋಜಿಸಿರುವ ಹಿನ್ನೆಲೆಯಲ್ಲಿ ಈ ಎಚ್ಚರಿಕೆ ಹೊರಬಿದ್ದಿದೆ.ಅಧ್ಯಕ್ಷ ಅಸೀಫ್ ಅಲಿ ಜರ್ದಾರಿ ತಾವು ಚುನಾವಣೆಗೆ ಸ್ಪರ್ಧಿಸದಂತೆ ನಿಷೇಧಕ್ಕೆ ಕುಮ್ಮಕ್ಕು ನೀಡಿದ್ದಾರೆಂದು ಷರೀಫ್ ಆರೋಪಿಸಿದ್ದು, ಅಧ್ಯಕ್ಷರು ಷರೀಫ್ ಹೇಳಿಕೆಯನ್ನು ಅಲ್ಲಗಳೆದಿದ್ದಾರೆ. ಮಾಜಿ ಮುಖ್ಯನ್ಯಾಯಮೂರ್ತಿ ಇಫ್ತಿಕರ್ ಚೌಧರಿ ಮತ್ತಿತರ ನ್ಯಾಯಾಧೀಶರ ಮರುನೇಮಕ ಮಾಡುವಂತೆ ಷರೀಫ್ ಒತ್ತಾಯಿಸುತ್ತಿದ್ದಾರೆ. ಟೆಲಿವಿಷನ್ ಪ್ರಸಾರದ ಸುದ್ದಿಗೋಷ್ಠಿಯಲ್ಲಿ ಪಾಕಿಸ್ತಾನದ ಉನ್ನತ ಭದ್ರತಾ ಮುಖ್ಯಸ್ಥ ರೆಹ್ಮಾನ್ ಮಲ್ಲಿಕ್ ಮಾತನಾಡುತ್ತಾ, ಶಾಂತಿಯುತ ಪ್ರತಿಭಟನೆಗಳಿಗೆ ಅವಕಾಶ ನೀಡುವುದಾಗಿ ತಿಳಿಸಿದರು. ಆದರೆ ಷರೀಫ್ ಅವರ ಭಾಷಣದ ಸಾರವನ್ನು ಓದಿ ಹೇಳಿದ ಅವರು, ಸರ್ಕಾರವನ್ನು ಖಂಡಿಸುವಂತೆ ಜನತೆಗೆ ಕರೆ ಮಾಡಿದ್ದಾರೆಂದು ಆರೋಪಿಸಿದರು. ಅವಿಧೇಯತೆಗೆ ಪ್ರಚೋದನೆ ನೀಡುವುದು ರಾಜದ್ರೋಹವೆನಿಸಿಕೊಳ್ಳುತ್ತದೆ. ಅದಕ್ಕೆ ಜೀವಾವಧಿ ಶಿಕ್ಷೆ ನೀಡಬಹುದು ಎಂದು ಮಲಿಕ್ ಹೇಳಿದರು. ಸರ್ಕಾರಕ್ಕೆ ಷರೀಫ್ ಅವರನ್ನು ಬಂಧಿಸುವ ಇಚ್ಛೆಯಿಲ್ಲ. ಆದರೆ ಪ್ರತಿಭಟನೆ ಸಂದರ್ಭದಲ್ಲಿ ಹಿಂಸಾಚಾರ ಭುಗಿಲೆದ್ದರೆ, ಹಾಗೆ ಮಾಡಲು ಆಧಾರವಿರುತ್ತದೆಂದು ಸುಳಿವು ನೀಡಿದರು. |